ಇದು ಶ್ರೀಮಂತರ ಕ್ರೀಡೆ. ನಮ್ಮಂತಹವರಿಗೆ ಇದು ಆಗಿ ಬರಲ್ಲ. ಅದರ ಬದಲು ಓದಿನ ಕಡೆ ಗಮನ ಕೊಡು ಎಂದು ಆಟೋ ಚಾಲಕರಾಗಿರುವತಂದೆ ಹೇಳಿದರೂ ಪಟ್ಟು ಬಿಡದೇ ಸತತ ಪ್ರಯತ್ನ ಮಾಡಿದ ಚೇತನ್ ಸಕಾರಿಯ ಈಗ ಐಪಿಎಲ್ ನಲ್ಲಿ ಮಿಂಚು ಹರಿಸಿರುವ ಯುವ ಪ್ರತಿಭೆ!
ಹೌದು, ಪಂಜಾಬ್ಸ್ ಕಿಂಗ್ಸ್ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರತಿನಿಧಿಸುವ ಮೂಲಕ ಐಪಿಎಲ್ ಗೆ ಪಾದಾರ್ಪಣೆ ಮಾಡಿದ ಚೇತನ್ ಸಕಾರಿಯ ಎಂಬ ಯುವ ವೇಗಿ ಕೆ.ಎಲ್. ರಾಹುಲ್ ಸೇರಿದಂತೆ 3 ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ.
ಕ್ರಿಕೆಟ್ ನಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಮಗನನ್ನು ಗಮನಿಸಿದ ತಂದೆ ಕ್ರಿಕೆಟ್ ಬಿಟ್ಟು ಓದಿನ ಕಡೆ ಗಮನ ಕೊಡುವಂತೆ ಹೇಳಿದ್ದರು. ಆದರೆ ಕ್ರಿಕೆಟ್ ಮೇಲಿನ ಒಲವು ಅವರನ್ನು ಬಿಡಲಿಲ್ಲ. ಗುಜರಾತ್ ನ ಭಾವ್ ನಗರ ನಿವಾಸಿಯಾದ ತಂದೆ ಹೊಟ್ಟೆಪಾಡಿಗಾಗಿ 2 ವರ್ಷಗಳಿಂದ ಆಟೋ ಓಡಿಸುತ್ತಿದ್ದರು.
ಅಪ್ಪನ ಮಾತು ಕೇಳದೇ ಆಟದಲ್ಲೇ ತಲ್ಲೀನನಾಗಿದ್ದ ಚೇತನ್ ಸಕಾರಿಯಾಗೆ ಪುನಶ್ಚೇತನ ಶಿಬಿರ, ದೈಹಿಕ ಫಿಟ್ನೆಸ್ ಸೇರಿದಂತೆ ಯಾವುದೇ ಮಾಹಿತಿ ಇಲ್ಲದ ಕಾರಣ ಗಾಯಗೊಂಡು 7ರಿಂದ 8 ತಿಂಗಳು ಮನೆಯಲ್ಲೇ ಉಳಿಯಬೇಕಾಯಿತು.
ಹೇಗಾದರೂ ಮಾಡಿ ಕ್ರಿಕೆಟ್ ಆಡುವುದನ್ನು ಮುಂದುವರಿಸಲು ಬಯಸಿದ ಚೇತನ್, ಡಿಪಾರ್ಟ್ ಮೆಂಟಲ್ ಸ್ಟೋರ್ ನಡೆಸುತ್ತಿದ್ದ ಅಂಕಲ್ ನೆರವು ಪಡೆದರು. ಅವರು ಹೇಳಿದ ಕೆಲಸ ಮಾಡುವುದು ಪ್ರತಿಯಾಗಿ ಅವನ ಎಲ್ಲಾ ರೀತಿಯ ವೆಚ್ಚ ಭರಿಸುವುದು ಆಗಿತ್ತು.
ಇದರ ಫಲವಾಗಿ 19 ವರ್ಷದೊಳಗಿನವರ ಸೌರಾಷ್ಟ್ರ ತಂಡದಲ್ಲಿ ಸ್ಥಾನ ಗಿಟ್ಟಿಸಿದ ಚೇತನ್ ಸಕಾರಿಯ, ಕರ್ನಾಟಕ ವಿರುದ್ಧದ ಪಂದ್ಯದ್ಲಲಿ 84 ರನ್ ನೀಡಿ 5 ವಿಕೆಟ್ ಪಡೆದು ಗಮನ ಸೆಳೆದರು. ಈತನ ಪ್ರತಿಭೆ ಗಮನಿಸಿದ ತಂಡ ಎಂಆರ್ ಎಫ್ ಫೌಂಡೇಷನ್ ನಲ್ಲಿ ತರಬೇತಿಗೆ ಶಿಫಾರಸು ಮಾಡಲಾಯಿತು.
ಎಂಆರ್ ಎಫ್ ನಲ್ಲಿ ಸಕಾರಿಯ ಬೌಲಿಂಗ್ ಶೈಲಿ ಗಮನಿಸಿದ ಆಸ್ಟ್ರೇಲಿಯಾದ ಮಾಜಿ ದಂತಕತೆ ಗ್ಲೆನ್ ಮೆಗ್ರಾಥ್ ಬೌಲಿಂಗ್ ಶೈಲಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ 5 ಕಿ.ಮೀ.ವೇಗ ಹೆಚ್ಚಿಸಿಕೊಂಡು 135 ಕಿ.ಮೀ.ವರೆಗೂ ಬೌಲಿಂಗ್ ಮಾಡಬಹುದು. ಇದರಿಂದ ರಣಜಿಯಲ್ಲಿ ಆಡಲು ಅರ್ಹತೆ ಗಿಟ್ಟಿಸಿಕೊಳ್ಳಬಹುದು ಎಂದು ಸಲಹೆ ನೀಡಿದ್ದರು.
ಶೂ ಇಲ್ಲದೇ ಅಖಾಡಕ್ಕೆ
ಚೇತನ್ ಸಕಾರಿಯ ಕ್ರಿಕೆಟ್ ಗೆ ಕಾಲಿಟ್ಟ ಆರಂಭದಲ್ಲಿ ಶೂ ಇಲ್ಲದೇ ಬೌಲಿಂಗ್ ಮಾಡುತ್ತಿದ್ದರು. ಪಂದ್ಯಗಳ ವೇಳೆ ಸ್ನೇಹಿತರ ಶೂ ಬಳಸುತ್ತಿದ್ದರು. ಒಂದು ದಿನ ಐಪಿಎಲ್ ನಲ್ಲಿ ಆಗಲೇ ಗಮನ ಸೆಳೆದಿದ್ದ ಶೆಲ್ಡಾನ್ ಜಾಕ್ಸನ್ ನೆರವಿಗೆ ಬಂದರು. ಅಭ್ಯಾಸದ ವೇಳೆ ನನ್ನನ್ನು ಔಟ್ ಮಾಡಿದರೆ ಶೂ ಕೊಡಿಸುವುದಾಗಿ ಚಾಲೆಂಜ್ ಹಾಕಿದರು. ಶೆಲ್ಡಾನ್ ಅವರನ್ನು ಔಟ್ ಮಾಡಿ ಶೂ ಗಿಟ್ಟಿಸಿಕೊಂಡಿದ್ದನ್ನು ಚೇತನ್ ನೆನೆಪಿಸಿಕೊಳ್ಳುತ್ತಾರೆ.
ಜೈದೇವ್ ಉನದ್ಕತ್ ಗಾಯಗೊಂಡ ಕಾರಣ ರಣಜಿಯಲ್ಲಿ ಆಡುವ ಅವಕಾಶ ಪಡೆದ ಚೇತನ್ ಸಕಾರಿಯ, 29 ವಿಕೆಟ್ ಪಡೆದು ಗಮನ ಸೆಳೆದರು. ಅಲ್ಲದೇ ಸೈಯ್ಯದ್ ಮುಷ್ತಾಕ್ ಅಲಿ ಟಿ-20 ಟೂರ್ನಿಯಲ್ಲಿ 12 ವಿಕೆಟ್ ಪಡೆದು ಮಿಂಚಿದರು. ಇವರ ಉತ್ತಮ ಪ್ರದರ್ಶನದಿಂದ ಐಪಿಎಲ್ ಹರಾಜಿನಲ್ಲಿ 1.2 ಕೋಟಿ ರೂ.ಗೆ ರಾಜಸ್ಥಾನ್ ಗೆ ಮಾರಾಟವಾದರು. ದುರಂತ ಅಂದರೆ ಅದರ ಹಿಂದಿನ ದಿನ ಸೋದರನನ್ನು ಅವರು ಕಳೆದುಕೊಂಡಿದ್ದರು.