ವಿಜಯೇಂದ್ರ ಬಳಿ ಸಾವಿರಾರು ಕೋಟಿ ರೂ. ಇದೆ. ಶೀಘ್ರದಲ್ಲೇ ಫೆಡರಲ್ ಬ್ಯಾಂಕ್ ಹಗರಣ ಹೊರಗೆ ಬರಲಿದೆ ನೋಡುತ್ತಿರಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುತ್ರ ವ್ಯಾಮೋಹದಿಂದ ಯಡಿಯೂರಪ್ಪ ತುಂಬಿ ತುಳುಕುತ್ತಿದ್ದಾರೆ. ಮಗನನ್ನ ಮಸ್ಕಿಯಲ್ಲಿ ಬಿಟ್ಟು ರೊಕ್ಕ ಹಂಚುತ್ತಿದ್ದಾರೆ. ವಿಜಯೇಂದ್ರ ಬಳಿ ಇರೋದು ರೊಕ್ಕ ಅಷ್ಟೇ ನಾಯಕತ್ವ ಇಲ್ಲ ಎಂದು ಲೇವಡಿ ಮಾಡಿದರು.
ವಿಜಯೇಂದ್ರ ಸಾವಿರಾರು ಕೋಟಿ ಲೂಟಿ ಮಾಡಿದ್ದಾರೆ. ಈಗ ಫೆಡರಲ್ ಬ್ಯಾಂಕ್ ಹಗರಣ ಬರುತ್ತೆ ನೋಡುವಿರಂತೆ. ವಿದೇಶದಲ್ಲಿ ಸಾವಿರಾರು ಕೋಟಿ ಇಟ್ಟಿರುವ ವಿಜಯೇಂದ್ರ ಹಗರಣ ಹೊರಗೆ ಬರುತ್ತೆ ಎಂದು ಯತ್ನಾಳ್ ಆರೋಪಿಸಿದರು.
ಯಡಿಯೂರಪ್ಪನವರ ಕಾಲದಲ್ಲಿ ಹಣ ಹಂಚಿ ಗೆಲ್ಲುವ ಪರಿಸ್ಥಿತಿ ಬಂದಿದೆ. ಯಡಿಯೂರಪ್ಪ ಬಿಜೆಪಿ ಕಟ್ಟುವಾಗ ಇಂತಹ ಪರಿಸ್ಥಿತಿ ಇರಲಿಲ್ಲ. ಇವತ್ತು ಎಂಪಿ ಆಗಬೇಕಾದರೆ ನೂರಾರು ಕೋಟಿ ಖರ್ಚು ಮಾಡಬೇಕು. ನಾವೆಲ್ಲ 2 ಲಕ್ಷ 5 ಲಕ್ಷದಲ್ಲಿ ಎಂಎಲ್ ಎ, ಎಂಪಿ ಆಗಿದಿವಿ ಎಂದು ಅವರು ಹೇಳಿದರು.
ಮೇ 2ರೊಳಗೆ ಸಿಎಂ ಬದಲಾವಣೆ ಆಗುತ್ತೆ. ನಾವು ಮತ್ತೆ ಮೇ 2ರ ಒಳಗೇ ಬಂದಿದ್ದೀವಿ. ಅದರ ಒಳಗೇ ಆಗುತ್ತೆ ಮತ್ಯಾಕೆ ಮೇ 2ರವರೆಗೆ ಹೋಗ್ತೀರಿ? ಮುಂದಿನ ಸಿಎಂ ಯತ್ನಾಳ್ ಆಗ್ತಾರೋ? ಯಾರು ಆಗ್ತಾರೋ ಗೊತ್ತಿಲ್ಲ. ಆದರೆ ಸಿಎಂ ಬದಲಾವಣೆ ಖಚಿತ ಎಂದು ಅವರು ಸ್ಪಷ್ಟಪಡಿಸಿದರು.