ಬೆಂಗಳೂರು ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿದ್ದು, ಅದರ ಜೊತೆಗೆ ಕಾಡುತ್ತಿರುವ ಕೊರೊನಾ ವ್ಯಾಕ್ಸಿನ್ ಸಮಸ್ಯೆ ಕುರಿತು ಮಾಹಿತಿ ನೀಡಲು ಸಂಜೆ 5 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಕೋವಿಡ್ ಉಸ್ತುವಾರಿ ಸಚಿವರ ಜೊತೆಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಕೊರೊನಾ ಲಸಿಕೆ ಕೊರತೆಯಿಂದಾಗಿ 18-44ರ ವಯೋಮಾನದವರಿಗೆ ಲಸಿಕೆ ನೀಡಿಕೆ ಸ್ಥಗಿತಗೊಳಿಸಲಾಗಿದೆ. ಆದರೂ 45 ವರ್ಷ ಮೇಲಿನವರಿಗೆ ಲಸಿಕೆ ಸಿಗುತ್ತಿಲ್ಲ. ಮೊದಲನೇ ಡೋಸ್ ಪಡೆದವರು ಎರಡನೇ ಡೋಸ್ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಿಎಂ ಸಭೆಯಲ್ಲಿ ಸ್ಪಷ್ಟನೆ ನೀಡಲಿದ್ದಾರೆ ಎನ್ನಲಾಗಿದೆ.
ಈ ವೇಳೆ ಲಾಕ್ ಡೌನ್ ವಿಸ್ತರಣೆ ಅಥವಾ ಕಠಿಣ ನಿಯಮಗಳ ಕುರಿತು ಮಾತನಾಡಬಹುದು ಎಂದು ನಿರೀಕ್ಷಿಸಲಾಗಿದೆ. ಅಲ್ಲದೆ, ಬಿಪಿಎಲ್ ಕಾರ್ಡ್ ದಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬಹುದು ಎಂಬ ಆಶಾಭಾವವಿದೆ.