ಧಾರವಾಡ: ಮಾಜಿ ಸಚಿವ ವಿನಯ್ ಕುಲಕರ್ಣಿ ಸಹೋದರ ವಿಜಯ್ ಕುಲಕರ್ಣಿ ಪ್ರಯಾಣಿಸುತ್ತಿದ್ದ ಕಾರು ಮೂರು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಧಾರವಾಡ ಹೊಸ ಬಸ್ ನಿಲ್ದಾಣದ ಬಳಿ ನಡೆದಿದೆ.
ಬೆಳಗಾವಿ ಕಡೆಯಿಂದ ಬರುತ್ತಿದ್ದ ಧಾರವಾಡದ ಕುಮಾರೇಶ್ವರ ನಗರದ ಕೆವಿಜಿ ಬ್ಯಾಂಕ್ ಬಳಿ ರಸ್ತೆ ಪಕ್ಕದಲ್ಲಿ ನಿಂತಿದ್ದ ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದೆ.
ಕಾರು ಡಿಕ್ಕಿ ಹೊಡೆದ ಪರಿಣಾಮ ಚರಣ ನಾಯಕ್ (17) ಹಾಗೂ ಶೇಖರ ಹುದ್ದಾರ (40) ಮೃತಪಟ್ಟಿದ್ದಾರೆ. ಪರಸ್ಪರ ಸಂಬಂಧಿಗಳಾಗಿದ್ದ ಇವರು ದೇವರಹುಬ್ಬಳ್ಳಿ ಮೂಲದವರು. ಸಾಧನಕೇರಿಯ ಅರವಿಂದ ಮಲಗೌಡ ಪಾಟೀಲ ಎಂಬುವವರು ಗಾಯಗೊಂಡು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಕ್ಷಣ ಸ್ಥಳಕ್ಕೆ ಬಂದ ಸಂಚಾರ ಠಾಣೆ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಮೃತ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳದಲ್ಲಿ ಹಾಗೂ ಆಸ್ಪತ್ರೆ ಮುಂಭಾಗದಲ್ಲಿ ಭಾರೀ ಜನರು ಸೇರಿದ್ದರು.
ವೇಗವಾಗಿ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದವರು ಯಾರೂ ಎಂಬುದು ಪತ್ತೆಯಾಗಿಲ್ಲ. ಕಾರಿನಲ್ಲಿ ವಿಜಯ ಕುಲಕರ್ಣಿಯವರು ಇದ್ದರಾ ಅಥವಾ ಇಲ್ಲವೋ ಎಂಬುದು ಕೂಡಾ ಗೊತ್ತಾಗಿಲ್ಲ. ಘಟನೆ ಬಗ್ಗೆ ಧಾರವಾಡ ಸಂಚಾರಿ ಪೋಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.