ಬೆಂಗಳೂರು : ಕೊರೊನಾ ಲಸಿಕೆ ಖರೀದಿಗೆ ಕಾಂಗ್ರೆಸ್ ಶಾಸಕರು ಸಂಸದರಿಂದ 100 ಕೋಟಿ ರೂಪಾಯಿ ನೀಡಲು ನಿರ್ಧಾರ ಮಾಡಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮತನಾಡಿದ ಅವರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಪ್ರತಿ ವರ್ಷ 2 ಕೋಟಿ ರೂಪಾಯಿ ಸಂಸದರು ಹಾಗೂ ರಾಜ್ಯಸಭಾ ಸದಸ್ಯರಿಗೆ ತಲಾ 5 ಕೋಟಿ ರೂಪಾಯಿ ನೀಡಲಾಗುತ್ತಿದೆ. ಪ್ರದೇಶಾಭಿವೃದ್ಧಿ ನಿಧಿ ಎಂದು ನೀಡಲಾಗುತ್ತದೆ. ಇದರಲ್ಲಿ ಒಂದು ಕೋಟಿ ರೂ.ವನ್ನು ಕಾಂಗ್ರೆಸ್ ಶಾಸಕರು, ಸಂಸದರು ದೇಣಿಗೆಯಾಗಿ ಲಸಿಕೆ ಖರೀದಿಸಲು ರಾಜ್ಯ ಸರಕಾರಕ್ಕೆ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ರಾಜ್ಯದ ಪ್ರತಿಯೊಬ್ಬರಿಗೆ ಕೊರೊನಾ ಲಸಿಕೆ ದೊರೆಯುವಂತಾಗಬೇಕು ಎಂಬುದು ನಮ್ಮ ಬಯಕೆ. ಆದ್ದರಿಂದ ಕಾಂಗ್ರೆಸ್ ನಲ್ಲಿ 99 ಶಾಸಕರು ಇದ್ದಾರೆ. ಸಂಸದರು ಹಾಗೂ ರಾಜ್ಯಸಭಾ ಸದಸ್ಯರ ಮೊತ್ತವನ್ನೂ ಸೇರಿಸಿ 100 ಕೋಟಿ ರೂಪಾಯಿ ನೀಡಲಾಗುವುದು ಎಂದರು.
ಕೊರೊನಾ ಲಸಿಕೆ ಖರೀದಿ ಮಾಡಿ ಜನರಿಗೆ ಸರಿಯಾಗಿ ನೀಡುವಲ್ಲಿ ಕೇಂದ್ರದ ಮೋದಿ ಹಾಗೂ ರಾಜ್ಯದ ಯಡಿಯೂರಪ್ಪ ಸರ್ಕಾರ ವಿಫಲವಾಗಿದೆ. ಹೀಗಾಗಿ ಕಂಪೆನಿಯಿಂದ ನೇರವಾಗಿ ಖರೀದಿ ಮಾಡಲು ಅವಕಾಶ ನೀಡಿ ಎಂದು ನಾವು ಸರ್ಕಾರವನ್ನು ಕೇಳುತ್ತೇವೆ. ಲಸಿಕೆ ಉತ್ಪಾದಕ ಕಂಪೆನಿಗಳಿಂದ ನೇರವಾಗಿ ಲಸಿಕೆ ಸಂಗ್ರಹಿಸಿ ಜನರಿಗೆ ವಿತರಿಸಲು ನೆರವಾಗಲು ಕಾಂಗ್ರೆಸ್ ಪಕ್ಷ ಮುಂದಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.