ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಅವರ ಮಕ್ಕಳಿಗೆ ಹೆರಿಗೆ ಮಾಡಿಸಿದ್ದ ಖ್ಯಾತ ವೈದ್ಯೆ ಡಾ.ಎಸ್.ಕೆ. ಭಂಡಾರಿ ಕೊರೊನಾ ಸೋಂಕಿನಿಂದ ನಿಧನರಾಗಿದ್ದಾರೆ.
ಅತ್ಯಂತ ಸುದೀರ್ಘ ಕಾಲ ವೈದ್ಯ ಸೇವೆ ಸಲ್ಲಿಸಿದ ಅಪರೂಪದ ವೈದ್ಯೆಯಾಗಿದ್ದ ಭಂಡಾರಿ ದೆಹಲಿಯ ಶ್ರೀ ಗಂಗಾರಾಮ್ ಆಸ್ಪತ್ರೆಯಲ್ಲಿ ಹಲವು ಗಣ್ಯರಿಗೆ ಚಿಕಿತ್ಸೆ ನೀಡಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.
ಹೃದಯ ಸಂಬಂಧಿ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎರಡು ವಾರಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಭಂಡಾರಿ ಅವರನ್ನು ಪರೀಕ್ಷಿಸಿದಾಗ ಕೋವಿಡ್ ಪಾಸಿಟಿವ್ ವರದಿ ಬಂದಿತ್ತು. ಕೋವಿಡ್ ನಿಂದಾಗಿ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿದ್ದು, ಗುರುವಾರ ಮುಂಜಾನೆ 2 ಗಂಟೆಗೆ ಮೃತಪಟ್ಟರು ಎಂದು ಗಂಗಾರಾಮ್ ಆಸ್ಪತ್ರೆಯ ಮುಖ್ಯಸ್ಥ ಡಾ.ಡಿ.ಎಸ್. ರಾಣಾ ತಿಳಿಸಿದ್ದಾರೆ.
ಭಂಡಾರಿ ಅವರು ಎರಡು ಕೋವಿಡ್ ಡೋಜ್ ಗಳನ್ನು ಕೂಡ ಪಡೆದಿದ್ದರು. ಭಂಡಾರಿ ಅವರ ಪತಿ ಕೂಡ ಮಾಜಿ ಐಎಎಸ್ ಅಧಿಕಾರಿಯಾಗಿದ್ದು, 97 ವರ್ಷದ ಅವರಿಗೆ ಕೂಡ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಪತ್ನಿ ಸಾವಿನ ಸುದ್ದಿ ತಿಳಿಸಲಾಗಿದೆ ಎಂದು ರಾಣಾ ವಿವರಿಸಿದರು.