ಬೆಂಗಳೂರು : ತೀವ್ರಗತಿಯಲ್ಲಿ ಹರಡುತ್ತಿರುವ ಕೊವಿಡ್ 19 ತಡೆಗಟ್ಟುವ ಹಿನ್ನಲೆಯಲ್ಲಿ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರು ನೂತನ ಮಾರ್ಗಸೂಚಿ ಜಾರಿಗೊಳಿಸಿದ್ದಾರೆ.
ಈ ಕುರಿತು ಮಾರ್ಗಸೂಚಿ ಹೊರಡಿಸಿರುವ ಅವರು, ಮುಂದಿನ ಆದೇಶದ ವರೆಗೆ ಎಲ್ಲ ಧಾರ್ಮಿಕ ಸಮಾರಂಭಗಳನ್ನು ನಿಷೇಧಗೊಳಿಸಿದ್ದು, ಮದುವೆಗಳಿಗೆ ತೆರೆದ ಪ್ರದೇಶಗಳಲ್ಲಿ 200 ಜನ ಮತ್ತು ಕಲ್ಯಾಣ ಮಂಟಪ, ಸಭಾಂಗಣ ಸೇರಿದಂತೆ ಇತರೆಡೆ 100 ಜನ ಮೀರಬಾರದು.
ಜನ್ಮದಿನ ಆಚರಣೆ, ನಿಧನ-ಶವಸಂಸ್ಕಾರ ಸೇರಿದಂತೆ ಇತರ ಆಚರಣೆಗಳಿಗೆ ತೆರೆದ ಪ್ರದೇಶದಲ್ಲಿ 50 ಜನ ಮತ್ತು ಸಭಾಂಗಣದಲ್ಲಿ 25 ಜನ ಮೀರದಂತೆ ನಿಯಮ ಪಾಲನೆ ಕಡ್ಡಾಯ. ರಾಜಕೀಯ ಸಮಾರಂಭಗಳಿಗೆ ತೆರೆದ ಪ್ರದೇಶಗಳಲ್ಲಿ 200 ಜನ ಮೀರಬಾರದು. ಈ ಮಾರ್ಗಸೂಚಿಯೂ ಏ. 30 ವರೆಗೆ ಅನ್ವಯವಾಗಲಿದೆ.
ಮದುವೆ ಮತ್ತಿತರ ಕಾರ್ಯಕ್ರಮಗಳಲ್ಲಿ ಸಭಾಂಗಣವನ್ನು ಸಂಬಂಧಪಟ್ಟವರು ಸ್ಯಾನಿಟೈಸೆಷನ್ ಮಾಡುವುದು ಕಡ್ಡಾಯವಾಗಿದ್ದು, ಒಂದು ವೇಳೆ ಈ ಮೇಲಿನ ನಿಯಮ ಉಲ್ಲಂಘನೆಯಾದಲ್ಲಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿ ಇಲಾಖೆಗೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.