ಮಂಗಳೂರು : ಮನೆಯೊಂದರಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ಮನೆಯೊಳಗಿನ ಎಲ್ಲಾ ಸಾಮಾಗ್ರಿಗಳು ಸಂಪೂರ್ಣ ಬೆಂಕಿಗಾಹುತಿಯಾಗಿ ಸುಟ್ಟು ಭಸ್ಮವಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪದ ಆಲಡ್ಕ ಮಸೀದಿ ಸಮೀಪ ನಡೆದಿದೆ.
ಇಲ್ಲಿನ ವಸತಿ ಸಂಕೀರ್ಣದಲ್ಲಿ ಕುಟುಂಬ ವಾಸ್ತವ್ಯ ಹೊಂದಿರುವ ಮನೆಯಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ. ಮನೆ ಮಂದಿ ಸಂಬಂಧಿಕರ ಮರಣ ಸಂಭವಿಸಿದ ಹಿನ್ನಲೆಯಲ್ಲಿ ತೆರಳಿದ್ದ ವೇಳೆ ಈ ಅಗ್ನಿ ಅವಘಡ ಸಂಭವಿಸಿದ್ದು, ಜೀವ ಹಾನಿಯಂತಹ ಹೆಚ್ಚಿನ ಅನಾಹುತ ಸ್ವಲ್ಪದರಲ್ಲೇ ತಪ್ಪಿ ಹೋಗಿದೆ. ಮನೆಯೊಳಗೆ ಬೆಂಕಿ ಜ್ವಾಲೆ ಕಂಡು ಸ್ಥಳೀಯರು ಬಂಟ್ವಾಳ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ.
ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಸಫಲರಾದರೂ ಅದಾಗಲೇ ಮನೆಯೊಳಗಿನ ಸೊತ್ತುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಮನೆಯೊಳಗಿನ ವಿದ್ಯುತ್ ಉಪಕರಣಗಳು, ಪೀಠೋಪಕರಣಗಳು ಸಹಿತ ಕಪಾಟಿನೊಳಗಿದ್ದ ವಸ್ತ್ರ, ಬಟ್ಟೆ-ಬರೆಗಳು, ಚಿನ್ನಾಭರಣಗಳು ಹಾಗೂ ನಗದು ಹಣ ಕೂಡಾ ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ಕರಟಿದ ಮಸಿಯಂತಾಗಿದೆ.
ನಿನ್ನೆ ಸಂಜೆ ತನ್ನ ಉದ್ಯಮದ ಲೈನ್ ಮುಗಿಸಿ ಬಂದ ಮನೆ ಮಾಲೀಕ ಹನೀಫ್ ಎಂಬುವವರು ಸುಮಾರು 50 ಸಾವಿರಕ್ಕೂ ಅಧಿಕ ಮೊತ್ತದ ನಗದು ಹಣವನ್ನು ಕಪಾಟಿನಲ್ಲೇ ಇಟ್ಟಿದ್ದರು ಎನ್ನಲಾಗಿದ್ದು ಅದೆಲ್ಲವೂ ಸುಟ್ಟು ಭಸ್ಮವಾಗಿದೆ. ಸುಮಾರು 20 ಪವನ್ ಗೂ ಅಧಿಕ ಚಿನ್ನಾಭರಣಗಳು ಇದ್ದು, ಅದೂ ಕೂಡಾ ಗುರುತು ಹಿಡಿಯಲಾರದಷ್ಟು ಕರಟಿ ಹೋಗಿದೆ. ಹನೀಫ್ ಅವರ ವಾಹನದ ಸಹಿತ ಇತರ ಅತ್ಯಮೂಲ್ಯ ದಾಖಲೆಗಳೂ ಕೂಡಾ ಬೆಂಕಿಯ ಕೆನ್ನಾಲಗೆಗೆ ಆಹುತಿಯಾಗಿದೆ.