ಬೆಂಗಳೂರು: ದೈನಂದಿನ ಕೃಷಿ ಚಟುವಟಿಕೆಗಳಿಗೆ ಕೃಷಿ ಇಲಾಖೆಗೆ ನೈಟ್ ಕರ್ಪ್ಯೂ ವೀಕೆಂಡ್ ಕರ್ಪ್ಯೂ ಜನತಾ ಕರ್ಪ್ಯೂ ಅನ್ವಯಿಸುವುದಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಇಲಾಖೆಯ ಯಾವುದೇ ಅಧಿಕಾರಿಗಳು ರೈತರ ದೈನಂದಿನ ಕೃಷಿ ಚಟುವಟಿಕೆಗಳಿಗೆ ತಡೆಯನ್ನಾಗಲಿ ತೊಂದರೆ ಮಾಡಬಾರದು. ಹೂವು, ಹಣ್ಣು ದವಸ ಧಾನ್ಯ ಮಾರುಕಟ್ಟೆಗೆ ಸಾಗಿಸಲು ಆರ್.ಟಿ.ಓ ಸೇರಿದಂತೆ ಯಾರೂ ತೊಂದರೆ ಮಾಡಬಾರದು ಎಂದರು.
ಬಿತ್ತನೆ ಕಾರ್ಯಕ್ಕಾಗಿ ಪೊಲೀಸ್ ಆಗಲೀ ಯಾವುದೇ ಇಲಾಖೆಯಾಗಲಿ ತೊಂದರೆ ಮಾಡಬಾರದು. ಮುಂಗಾರು ಈಗಾಗಲೇ ಪ್ರಾರಂಭವಾಗಿದ್ದು, ರಸಗೊಬ್ಬರ ಅಂಗಡಿಗಳಿಗಾಗಲೀ, ರೈತ ಸಂಪರ್ಕ ಕೇಂದ್ರಗಳಿಗಾಗಲೀ, ಬಿತ್ತನೆ ಕಾರ್ಯಕ್ಕಾಗಲೀ ಯಾರೂ ಸಹ ತೊಂದರೆಯನ್ನುಂಟು ಮಾಡಬಾರದು ಎಂದು ತಿಳಿಸಿದರು.
ಕೆಲವು ಕಡೆ ಕೃಷಿ ಪರಿಕರಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿರುವುದು ತಿಳಿದು ಬಂದಿರುತ್ತದೆ. ಹೀಗೆ ಮಾಡಿರುವುದು ತಪ್ಪು. ಎಲ್ಲಾ ಇಲಾಖೆಗಳು ಎಲ್ಲಾ ಇಲಾಖಾಧಿಕಾರಿಗಳು ರೈತರಿಗೆ ಕೃಷಿ ಚಟುವಟಿಕೆಗಳಿಗೆ ಸಹಕಾರ ನೀಡಬೇಕು. ಕೃಷಿ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧ ಹೇರಬಾರದು ಎಂದರು.