ಕೋವಿಡ್ ನಿಂದ ಮೃತಪಟ್ಟ ತಂದೆಯ ಅಂತ್ಯ ಸಂಸ್ಕಾರದ ವೇಳೆ 34 ವರ್ಷದ ಪುತ್ರಿ ಹೊತ್ತಿ ಉರಿಯುತ್ತಿದ್ದ ಚಿತೆಯ ಮೇಲೆ ಹಾರಿದ ಪ್ರಾಣತ್ಯಾಗಕ್ಕೆ ಯತ್ನಿಸಿದ ಭೀಕರ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ರಾಜಸ್ಥಾನದ ಬರ್ಮರ್ ಜಿಲ್ಲೆಯಲ್ಲಿ ದಾಮೋದರ್ ದಾಸ್ (73) ಕೋವಿಡ್ ನಿಂದ ಮೃತಪಟ್ಟಿದ್ದರು. ಅವರಿಗೆ ಮೂರು ಹೆಣ್ಣು ಮಕ್ಕಳಿದ್ದು, ಕಿರಿಯ ಪುತ್ರಿ ಶಾರದಾ ಅಂತ್ಯ ಸಂಸ್ಕಾರ ನೆರವೇರಿಸುತ್ತಿದ್ದು, ದಿಢೀರನೆ ಚಿತೆಯ ಮೇಲೆ ಹಾರಿದ್ದಾರೆ. ಕೂಡಲೇ ಸಮೀಪದಲ್ಲಿದ್ದವರು ಆಕೆಯನ್ನು ಚಿತೆಯಿಂದ ಹೊರಗೆಳೆದು ರಕ್ಷಿಸಿ ಸಮೀಪದ ಆಸ್ಪತ್ರೆಗೆ ಕೂಡಲೇ ದಾಖಲಿಸಿದ್ದು, ಶೇ.70ರಷ್ಟು ಸುಟ್ಟ ಗಾಯದೊಂದಿಗೆ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.
ದಾಮೋದರ್ ದಾಸ್ ಅವರ ಪತ್ನಿ ಕೆಲವು ಸಮಯದ ಹಿಂದೆ ಮೃತಪಟ್ಟಿದ್ದು, ಕಿರಿಯ ಪುತ್ರಿ ಚಿತೆಯ ಮೇಲೆ ಹಾರಿ ಆತ್ಮಾಹುತಿಗೆ ಯತ್ನಿಸಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.