ಚಾಮರಾಜನಗರ : ರಾಜ್ಯ ಬಿಜೆಪಿ ಪಕ್ಷದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬಿಟ್ಟರೆ ಬೇರೆ ಯಾರು ಪರ್ಯಾಯ ನಾಯಕರೇ ಇಲ್ಲ ಎಂದು ಶಾಸಕ ನಿರಂಜನ್ ಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪನವರು ರಾಜ್ಯದಲ್ಲಿ ಪಕ್ಷಾತೀತ ನಾಯಕರು ಅವರು ನಮಗೆಲ್ಲ ಗಾಡ್ ಫಾದರ್. ಬಿಜೆಪಿ ಪಕ್ಷದಲ್ಲಿ ಒಬ್ಬರು ಇಬ್ಬರು ನಾಯಕರು ಸಿಎಂ ಬದಲಾವಣೆ ವಿಚಾರ ಮಾತನಾಡುತ್ತಾರೆ. ಈ ವಿಚಾರ ಮಾತನಾಡಿದ್ರೆ ಅವರಿಗೆ ಮುಖಭಂಗವಾಗಲಿದೆ ಎಂದು ನಾಯಕತ್ವ ಬದಲಾವಣೆ ಹೇಳಿಕೆ ನೀಡಿದವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.
ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಪ್ರಶ್ನೆ ಮಾಡುವ ನಾಯಕರು ನಮ್ಮ ಪಕ್ಷದಲ್ಲಿ ಇಲ್ಲ. ಯಡಿಯೂರಪ್ಪನವರೇ ಮುಂದಿನ ಎರಡು ವರ್ಷ ಮುಖ್ಯಮಂತ್ರಿಯಾಗಿ ಇರುತ್ತಾರೆ. ಅವರ ನಾಯಕತ್ವದಲ್ಲೇ ಮುಂದಿನ ಚುನಾವಣೆ ಎದುರಿಸಲಿದ್ದೇವೆ ಎಂದು ಹೇಳಿದರು.
ಇನ್ನು ಚಾಮರಾಜನಗರ ಆಕ್ಸಿಜನ್ ದುರಂತ ಕೇಸ್ ಗೆ ಸಂಬಂಧಿಸಿದಂತೆ ಮೃತಪಟ್ಟ ಕುಟುಂಬಗಳಿಗೆ 2 ಲಕ್ಷ ಪರಿಹಾರ ಹಣ ನೀಡಲಾಗುತ್ತಿದೆ. ಹಾಗೂ ಪ್ರಕರಣದ ತನಿಖೆ ನ್ಯಾಯಾಲಯದಲ್ಲಿದೆ ಆದ್ದರಿಂದ ಹೆಚ್ಚಿನ ಮಾಹಿತಿ ಏನು ಹೇಳಬಾರದು. ಆಕ್ಸಿಜನ್ ದುರಂತಕ್ಕೆ ಕಾರಣ ಅದವರಿಗೆ ಖಂಡಿತವಾಗಿಯೂ ಶಿಕ್ಷೆ ಆಗಲಿದೆ ಎಂದು ತಿಳಿಸಿದರು.