ಭಾರತೀಯ ಬಾಸ್ಮತಿ ಅಕ್ಕಿಗೆ ಮಧ್ಯಪ್ರಾಚ್ಯ ದೇಶಗಳಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಪ್ರತಿ ಟನ್ಗೆ 20-30 ಡಾಲರ್ ಹೆಚ್ಚಿನ ದರ ಸಿಗುತ್ತಿದೆ. ಸ್ಥಳೀಯ ಹಣದುಬ್ಬರವನ್ನು ತಣ್ಣಗಾಗಿಸಲು ಭಾರತ ಸರಕಾರ ಅಕ್ಕಿಯ ರಫ್ತಿನ ಮೇಲೆ ನಿಷೇಧ ಹೇರಬಹುದು ಎಂಬ ವದಂತಿಯ ಮೇಲೆ ಬಾಸ್ಮತಿ ಅಕ್ಕಿಗೆ ಎಲ್ಲಿಲದ ಬೇಡಿಕೆ ಬಂದಿದೆ.
ಸುವಾಸನೆಭರಿತ, ಗಾತ್ರದಲ್ಲಿ ಉದ್ದವಾಗಿರುವ ಬಾಸ್ಮತಿ ಅಕ್ಕಿಯನ್ನು ತುರ್ತಾಗಿ ಕಳುಹಿಸುವಂತೆ ಖರೀದಿದಾರರು ರಫ್ತುದಾರರಿಗೆ ದುಂಬಾಲು ಬಿದ್ದಿದ್ದಾರೆ ಎನ್ನಲಾಗಿದೆ. ಜಾಗತಿಕ ಮಾರುಕಟ್ಟೆಗಳಲ್ಲಿನ ದೃಢವಾದ ಬೆಲೆ ಏರಿಕೆಯ ಟ್ರೆಂಡ್ನಿಂದಾಗಿ ಭಾರತದಲ್ಲೂ ಬಾಸ್ಮತಿ ಅಕ್ಕಿಯ ದರ ಕಳೆದ ಎರಡು ವಾರಗಳಲ್ಲಿ ಶೇ. 15ರಷ್ಟು ಏರಿಕೆಯಾಗಿದೆ. ಕಳೆದ ವರ್ಷದ ನವೆಂಬರ್ನಲ್ಲಿ ಪ್ರತಿ ಟನ್ಗೆ 1,200 ಡಾಲರ್ ಇದ್ದ ಬಾಸ್ಮತಿ ಅಕ್ಕಿಯ ರಫ್ತು ದರ ಕಳೆದ ಎರಡು ವಾರಗಳಲ್ಲಿ 1,350 ಡಾಲರ್ (1.04 ಲಕ್ಷ ರೂ.) ಗೆ ಏರಿಕೆಯಾಗಿದೆ. ಜತೆಗೆ ಮಧ್ಯಪ್ರಾಚ್ಯ ಖರೀದಿದಾರರು ಇದಕ್ಕೂ ಹೆಚ್ಚಿನ ಬೆಲೆ ನೀಡಿ ಪಾವತಿಸುತ್ತಿದ್ದಾರೆ. ಇದನ್ನೂ ಓದಿ :- ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು – ರಾಜಪಕ್ಸೆ ಸಂಪುಟಕ್ಕೆ ಎಂಟು ಸಚಿವರು ಸೇರ್ಪಡೆ !
ಖರೀದಿದಾರರು ತುರ್ತಾಗಿ ಸಾಗಾಟ ಮಾಡುವಂತೆ ರಫ್ತುದಾರರಿಗೆ ಕೇಳಿಕೊಳ್ಳುತ್ತಿದ್ದು, ಹೆಚ್ಚಿನ ಬೆಲೆಯನ್ನೂ ನೀಡುತ್ತಿದ್ದಾರೆ. ಸರ್ಕಾರವು ಗೋಧಿ ರಫ್ತುನ್ನು ನಿಷೇಧಿಸಿದ ರೀತಿ ಬಾಸ್ಮತಿ ಅಕ್ಕಿಯ ರಫ್ತುನ್ನೂ ನಿಷೇಧಿಸಬಹುದು ಎಂಬ ವದಂತಿಗಳು ಹರಡುತ್ತಿವೆ. ಇದು ರಫ್ತಿಗೆ ಉತ್ತೇಜನ ನೀಡುತ್ತಿದೆ,” ಎನ್ನಲಾಗಿದೆ. ರಷ್ಯಾ-ಉಕ್ರೇನ್ ಯುದ್ಧದ ನಡುವೆ ಜಾಗತಿಕ ಪೂರೈಕೆ ವ್ಯವಸ್ಥೆಯಲ್ಲಿ ಏರುಪೇರಾಗಿದ್ದು, ಆಹಾರ ಧಾನ್ಯಗಳ ಬೆಲೆ ನಿಯಂತ್ರಿಸಲು ಭಾರತವು ತಿಂಗಳ ಆರಂಭದಲ್ಲಿ ಗೋಧಿ ರಫ್ತಿಗೆ ಕಡಿವಾಣ ಹಾಕಿತ್ತು. ಆದರೆ ಭಾರತವು ಅಕ್ಕಿ ರಫ್ತು ನಿಷೇಧಿಸುವ ಯಾವುದೇ ಸೂಚನೆ ಇಲ್ಲ ಎಂದು ವ್ಯಾಪಾರಿಗಳು ಹೇಳಿದ್ದಾರೆ.
ಇದನ್ನೂ ಓದಿ :- ದಾವೋಸ್ ನಲ್ಲಿ ಸದ್ಗುರು ಜಗ್ಗಿ ವಾಸುದೇವ್ ಭೇಟಿಯಾದ ಸಿಎಂ ನಿಯೋಗ