ಮಾಸ್ಕೋ: ಪತ್ರಕರ್ತೆಯೊಬ್ಬರು ನೇರಪ್ರಸಾರದಲ್ಲಿ ವರದಿ ಮಾಡುತ್ತಿದ್ದರು. ಆಗ ಅಲ್ಲಿಗೆ ಬಂದ ತುಂಟ ಶ್ವಾನವೊಂದು ಪತ್ರಕರ್ತೆಯ ಕೈಯಲ್ಲಿದ್ದ ಮೈಕ್ ಕಿತ್ತುಕೊಂಡು ಓಡಿದೆ.
ತುಂಟ ಶ್ವಾನವೊಂದು ಪತ್ರಕರ್ತೆಗೆ ಕಾಟಕೊಟ್ಟಿದೆ. ಪತ್ರಕರ್ತೆ ನೇರಪ್ರಸಾರದಲ್ಲಿ ಮಾಹಿತಿ ನೀಡುತ್ತಿದ್ದರು. ಈ ಅನಿರೀಕ್ಷಿತ ಸನ್ನಿವೇಶದಿಂದ ಒಂದಷ್ಟು ಹೊತ್ತು ತಬ್ಬಿಬ್ಬಾದ ನಾಡೆಜ್ಡಾ ಸೆರೆಜ್ಕಿನಾ ಎಂಬ ಪತ್ರಕರ್ತೆ ಮೈಕ್ ಮರಳಿ ಪಡೆಯಲು ಶ್ವಾನದ ಹಿಂದೆಯೇ ಒಂದಿಷ್ಟು ದೂರ ಓಡಿದ್ದಾರೆ. ಮಾಸ್ಕೋದಲ್ಲಿ ನಡೆದ ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಘಟನೆಯಿಂದ ಸ್ಟುಡಿಯೋದಲ್ಲಿದ್ದ ನಿರೂಪಕಿ ಒಂದು ಕ್ಷಣ ಗಲಿಬಿಲಿಗೊಂಡಿದ್ದಾರೆ. ನಿರೂಪಕಿ ಎಲೀನಾ ಡ್ಯಾಶ್ಕುವಾ ಪತ್ರಕರ್ತೆ ಸೆರೆಜ್ಕಿನಾ ಅವರಿಂದ ಹವಾಮಾನದ ಬಗ್ಗೆ ವಿವರಗಳನ್ನು ಪಡೆಯುತ್ತಿದ್ದರು. ಈ ವೇಳೆ ಗೋಲ್ಡನ್ ರಿಟ್ರೈವರ್ ತಳಿಯ ಶ್ವಾನವೊಂದು ಹೀಗೆ ಮಾಡಿದೆ. ಈ ದೃಶ್ಯ ನೇರಪ್ರಸಾರದಲ್ಲಿ ಬಿತ್ತರವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಶ್ವಾನದ ತುಂಟಾಟಕ್ಕೆ ನೆಟ್ಟಿಗರು ಮಾರು ಹೋಗಿದ್ದಾರೆ.