ತನಿಖಾಧಿಕಾರಿಗಳ ಮೇಲೆ ರಾಜಕೀಯ ಪ್ರಭಾವ ಬೀರಿ ನನ್ನ ವಿರುದ್ಧ ಷಡ್ಯಂತ್ರ ರೂಪಿಸಲಾಗುತ್ತಿದೆ ಎಂದು ಆರೋಪಿಸಿ ಪೊಲೀಸ್ ಆಯುಕ್ತರಿಗೆ ಸಿಡಿ ಯುವತಿ ದೂರು ನೀಡಿದ್ದಾರೆ.
ಭಾನುವಾರ ಪೊಲೀಸ್ ಆಯುಕ್ತರಾದ ಕಮಲ್ ಪಂತ್ ಅವರಿಗೆ ದೂರು ನೀಡಿರುವ ಯುವತಿ, ಸರಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಲೈಂಗಿಕವಾಗಿ ಬಳಿಸಿಕೊಂಡು ಅತ್ಯಾಚಾರ ಎಸಗಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ರಕ್ಷಿಸಲು ರಾಜಕೀಯ ಪ್ರಭಾವ ಬೀರುತ್ತಿರುವ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ.
ನನಗೆ ಭದ್ರತೆ ನೀಡುವ ಭರವಸೆ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳ ಮುಂದೆ ನಾನು ಹಾಜರಾಗಿ ಘಟನೆ ವಿವರವನ್ನು ನೀಡಿದ್ದೇನೆ. ಆದರೆ ಸ್ವತಃ ಮುಖ್ಯಮಂತ್ರಿಗಳು ರಮೇಶ್ ಜಾರಕಿಹೊಳಿ ಅವರು ಪ್ರಕರಣದಲ್ಲಿ ದೋಷಮುಕ್ತರಾಗಿ ಹೊರಗೆ ಬರುತ್ತಾರೆ ಎಂಬ ಹೇಳಿಕೆ ನೀಡಿರುವುದು ಆಘಾತ ಮೂಡಿಸಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ತನಿಖಾಧಿಕಾರಿಗಳು ನನಗೆ ಪ್ರಶ್ನೆಗಳನ್ನು ಕೇಳಿದ ರೀತಿ ಹಾಗೂ ಪಂಚನಾಮೆ ಮಾಡಿಸಿದ ರೀತಿ ನೋಡಿದರೆ ನಾನು ದೂರುದಾರಳೋ ಅಥವಾ ಆರೋಪಿಯೋ ಎಂಬ ಅನುಮಾನ ಕಾಡತೊಡಗಿದೆ. ಅಲ್ಲದೇ ನನ್ನ ತೇಜೋವಧೆ ಮಾಡುವಂತೆ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗುವಂತೆ ಮಾಡಲಾಗಿದೆ ಎಂದು ದೂರಿನಲ್ಲಿ ಯುವತಿ ಆರೋಪಿಸಿದ್ದಾಳೆ.
ಸರಕಾರದ ಒತ್ತಡಕ್ಕೆ ಮಣಿಯದೇ, ಆರೋಪಿಗೆ ಯಾವುದೇ ರಿಯಾಯಿತಿ ನೀಡದೇ ಸರಿಯಾದ ದಿಕ್ಕಿನಲ್ಲಿ ವಿಚಾರಣೆ ನಡೆಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಯುವತಿ ಆಗ್ರಹಿಸಿದ್ದಾಳೆ.