ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಡ್ರಗ್ಸ್ ದಂಧೆಗೆ ಕಡಿವಾಣ ಹಾಕುವುದು ಹೇಗೆ ಎಂದು ಪೊಲೀಸರು ತಲೆಕೆಡಿಸಿಕೊಳ್ಳುತ್ತಿದ್ದರೆ, ಪೊಲೀಸರ ಸರ್ಪಗಾವಲ್ಲಿ ಕಂಬಿ ಎಣಿಸುತ್ತಿರುವ ಕೈದಿಗಳಿಗೆ ಪಾರ್ಸೆಲ್ ಮೂಲಕ ಡ್ರಗ್ಸ್ ಸರಬರಾಜು ಆಗುತ್ತಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಮಡಿವಾಳ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಮುಜೀಬ್ ಗೆ ಬಂದಿದ್ದ ಕೊರಿಯರ್ ಅನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ತಪಾಸಣೆ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
ಕೇರಳದಿಂದ ಕೊರಿಯರ್ ಮೂಲಕ ಡ್ರಗ್ಸ್ ಬಂದಿದೆ ಎಂದು ಶಂಕಿಸಲಾಗಿದೆ. ಕೈದಿ ನಂಬರ್ 1716 ಹೆಸರಿನಲ್ಲಿ ಬಂದಿದ್ದ ಕೊರಿಯರ್ ಅನ್ನು ಜಿನೇಬ್ ಎಂಬಾತ ಕೇರಳದ ಕಣ್ಣೂರಿನಿಂದ ಕಳಿಸಿದ್ದ ಎನ್ನಲಾಗಿದೆ.
ಕೇರಳದಿಂದ ಆರೋಪಿಗೆ ಕಳುಹಿಸಿದ್ದ ತಿಂಡಿ ಹಾಗೂ ಪ್ಯಾಕೆಟ್ ಗಳನ್ನು ಪರಿಶೀಲಿಸಿದಾಗ ಪೌಡರ್ ಪತ್ತೆಯಾಗಿದ್ದು, ನೈಸಲ್ ಪೌಡರ್ ಬಾಟಲ್ ನಲ್ಲಿ ಡ್ರಗ್ಸ್ ಪೌಡರ್ ತುಂಬಲಾಗಿತ್ತು. ತಪಾಸಣೆ ವೇಳೆ ಅನುಮಾನ ಬಂದು ಚೆಕ್ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
10ಕ್ಕೂ ಅಧಕ ವರ್ಷಗಳಿಂದ ಜೈಲು ವಾಸ ಅನುಭವಿಸಿರುವ ಮುಜೀಬ್, ಕಳ್ಳ ಮಾರ್ಗದಲ್ಲಿ ಜೈಲಿಗೆ ಡ್ರಗ್ಸ್ ತರಿಸಿಕೊಳ್ಳುತ್ತಿದ್ದನೇ ಎಂಬ ಅನುಮಾನ ಕಾಡತೊಡಗಿದೆ. ಲ್ಯಾಬ್ ರಿಪೋರ್ಟ್ ಬಂದ ನಂತರ ಕೇರಳದ ಕಣ್ಣೂರಿಗೆ ತೆರಳಲಿರುವ ಪೊಲೀಸರು ಜಿನೇಬ್ ಬಂಧನಕ್ಕೆ ಬಲೆ ಬೀಸಲಿದ್ದಾರೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.