ಮಧ್ಯಮ ವೇಗಿ ಹರ್ಷಲ್ ಪಟೇಲ್ ಮಾರಕ ದಾಳಿ ಹಾಗೂ ಡೆತ್ ಓವರ್ ನಲ್ಲಿ ತೋರಿದ ಸಮಯಪ್ರಜ್ಞೆಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಯ ಎಸೆತದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಜಯಭೇರಿ ಬಾರಿಸಿ ಐಪಿಎಲ್ ನಲ್ಲಿ ಗೆಲುವಿನ ಆರಂಭ ಪಡೆಯಿತು.
ಚೆನ್ನೈನಲ್ಲಿ ಶುಕ್ರವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ 9 ವಿಕೆಟ್ ಗೆ 159 ರನ್ ಗಳಿಸಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಆರ್ ಸಿಬಿ 20 ಓವರ್ ಗಳಲ್ಲಿ 160 ರನ್ ಗಳಿಸಿತು. ಈ ಮೂಲಕ ಮುಂಬೈ ಇಂಡಿಯನ್ಸ್ ಸತತ 9ನೇ ಆವೃತ್ತಿಯಲ್ಲೂ ಗೆಲುವಿನ ಆರಂಭ ಪಡೆಯುವಲ್ಲಿ ವಿಫಲವಾಯಿತು.
ದೇವದತ್ ಪಡಿಕಲ್ ಅನುಪಸ್ಥಿತಿ ಹಿನ್ನೆಲೆಯಲ್ಲಿ ವಾಷಿಂಗ್ಟನ್ ಸುಂದರ್ ಜೊತೆ ವಿರಾಟ್ ಕೊಹ್ಲಿ ಇನಿಂಗ್ಸ್ ಆರಂಭಿಸಿದರು. ಆದರೆ ಸುಂದರ್ (10) ಮತ್ತು ರಜತ್ ಪಟಿಡರ್ (8) ನಿರ್ಗಮಿಸಿದ ನಂತರ ಜೊತೆಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಮ್ಯಾಕ್ಸ್ ವೆಲ್ 3ನೇ ವಿಕೆಟ್ ಗೆ 52 ರನ್ ಜೊತೆಯಾಟ ನಿಭಾಯಿಸಿ ತಂಡವನ್ನು ಆಧರಿಸಿದರು.
ಆದರೆ 29 ಎಸೆತಗಲ್ಲಿ 4 ಬೌಂಡರಿ ಒಳಗೊಂಡ 33 ರನ್ ಗಳಿಸಿದ್ದ ಕೊಹ್ಲಿ ಮತ್ತು 28 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 39 ರನ್ ಗಳಿಸಿದ್ದ ಮ್ಯಾಕ್ಸ್ ವೆಲ್ ನಿರ್ಗಮಿಸಿದ ನಂತರ ಆರ್ ಸಿಬಿ ಮತ್ತೆ ಒತ್ತಡಕ್ಕೆ ಒಳಗಾಯಿತು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಮುಂಬೈ, ಹರ್ಷಲ್ ಪಟೇಲ್ ಅವರ ಮಾರಕ ದಾಳಿಗೆ ತತ್ತರಿಸಿ ಬೃಹತ್ ಮೊತ್ತ ಪೇರಿಸುವಲ್ಲಿ ಮುಗ್ಗರಿಸಿತು. ಹರ್ಷಲ್ ಪಟೇಲ್ 5 ವಿಕೆಟ್ ಪಡೆದು ಮಿಂಚಿದರೆ, ಕ್ರಿಸ್ ಲಿನ್ 35 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 49 ರನ್ ಬಾರಿಸಿ ವಾಷಿಂಗ್ಟನ್ ಸುಂದರ್ ಅವರ ಎಸೆತದಲ್ಲಿ ಅವರೇ ಹಿಡಿದ ಅದ್ಭುತ ಕ್ಯಾಚ್ ಗೆ ಬಲಿಯಾದರು.
ಉಳಿದಂತೆ ನಾಯಕ ರೋಹಿತ್ ಶರ್ಮ (19), ಸೂರ್ಯಕುಮಾರ್ ಯಾದವ್ (31), ಇಶಾನ್ ಕಿಶನ್ (28), ಹಾರ್ದಿಕ್ ಪಾಂಡ್ಯ (13) ತಂಡ ಉತ್ತಮ ಮೊತ್ತ ಕಲೆಹಾಕುವಲ್ಲಿ ನೆರವಾದರು.