ತುಮಕೂರು: ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಒಂದೇ ದಿನ ಸರ್ಕಾರಿ ಶಾಲೆಯ ಮೂವರು ಶಿಕ್ಷಕರು ಕೊರೊನಾ ಸೋಂಕಿಗೆ ಬಲಿಯಾಗಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ ನಡೆದಿದೆ.
ಕಿಣಿಗಲ್ ತಾಲೂಕಿನ ಉಜ್ಜಯನಿ ಪ್ರೌಢ ಶಾಲೆಯ ಶಿಕ್ಷಕ ಶಿವರಾಮೇಗೌಡ, ಮಲ್ಲಿಪಾಳ್ಯ ಪ್ರೌಢ ಶಾಲೆಯ ಪರಮೇಶ್ವರ್ ಆಚಾರ್ ಹಾಗೂ ತುರುಗೂರು ಪ್ರಾಥಮಿಕ ಶಾಲಾ ಶಿಕ್ಷಕ ಕೃಷ್ಣಪ್ಪ ಕೊರೊನ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಈ ನಡುವೆ ತುಮಕೂರು ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಅತಿ ಹೆಚ್ಚು ಸೋಂಕಿತರು ಇರುವ 18 ಬಡವಾಣೆಗಳನ್ನು ಕೋವಿಡ್ ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದೆ. ನಿನ್ನೆ ತಿಪಟೂರು ತಾಲ್ಲೂಕಿನ ಕೆರೆಗೋಡಿ ಗ್ರಾಮದ ದಂಪತಿ ಕೊರೊನಾದಿಂದ ಸಾವನ್ನಪ್ಪಿದರು. ಅಲ್ಲದೆ ನಿನ್ನೆ ಜಿಲ್ಲೆಯಲ್ಲೇ ಐದು ಮಂದಿ ಕೊರೊನಾ ಬಲಿ ತೆಗೆದುಕೊಂಡಿತ್ತು.