ವಿನಾಯಿತಿ ದರದಲ್ಲಿ ಕಾರು ಕೊಡಿಸುತ್ತೇನೆ. ಮದುವೆ ಆಗುತ್ತೇನೆ ಎಂದು ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ನಕಲಿ ಸೇನಾಧಿಕಾರಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.
ಬೆಳಗಾವಿ ಮೂಲದ ಅಂಜನೇಷ್ ಮಟಪತಿ (31) ಬಂಧಿತ ವ್ಯಕ್ತಿ.
ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆಂದು ನಂಬಿಸಿದ್ದ ಅಂಜನೇಷ್, ತೆರಿಗೆ ಹಾಗೂ ಇತರೆ ವಿನಾಯತಿಯಲ್ಲಿ ಮೊಬೈಲ್, ಕಾರು ಖರೀದಿಸಿ ಕೊಡುತ್ತೇನೆ ಎಂದು ಹತ್ತಾರು ಮಂದಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ.
ನಕಲಿ ಸೇನಾಧಿಕಾರಿಯನ್ನು ಬಂಧಿಸಿದ ನಕಲಿ ಸುಬ್ರಹ್ಮಣ್ಯನಗರ ಪೊಲೀಸರು, ಆರೋಪಿಯಿಂದ ನಕಲಿ ಪಿಸ್ತೂಲ್, ಸೇನೆಯ ಗುರುತಿನ ಚೀಟಿ, ಸಮವಸ್ತ್ರ ವಶಪಡಿಸಿಕೊಂಡಿದ್ದಾರೆ.
ಇತ್ತೀಚೆಗೆ ಸುಬ್ರಹ್ಮಣ್ಯನಗರ ನಿವಾಸಿ ನಾಗೇಂದ್ರ ಮತ್ತು ಅವರ ಸಂಬಂಧಿಯೊಬ್ಬರಿಗೆ ಸುಮಾರು 23 ಲಕ್ಷ ರೂ. ವಂಚಿಸಲಾಗಿತ್ತು.
ನಾಗೇಂದ್ರ ಅವರ ದೂರ ಸಂಬಂಧಿಯೊಬ್ಬರ ಮೂಲಕ ಪರಿಚಯವಾದ ಮಟಪತಿ, ತಾನೂ ಭಾರತಿಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದ. ಹಣ ವಂಚನೆ ಮಾತ್ರವಲ್ಲದೆ, ಮೂವರು ಯುವತಿಯರಿಗೂ ಮದುವೆ ಮಾಡಿಕೊಳ್ಳುತ್ತೇನೆ ಎಂದು ನಂಬಿಸಿದ್ದು, ಈ ಪೈಕಿ ಇಬ್ಬರು ಯುವತಿಯರ ಜತೆ ನಿಶ್ಚಿತಾರ್ಥ ಕೂಡ ಮಾಡಿಕೊಂಡು ವಂಚಿಸಿರುವುದು ಬೆಳಕಿಗೆ ಬಂದಿದೆ.