ವರ್ಷದ ಮೊದಲ ಚಂಡಮಾರುತ ಭಾರತದ ಅರೆಬಿಯನ್ ಸಮುದ್ರದಲ್ಲಿ ಮೇ 16ರಂದು ದಕ್ಷಿಣ ಭಾರತವನ್ನು ಅಪ್ಪಳಿಸುವ ಸಾಧ್ಯತೆ ಇದ್ದು, ದಕ್ಷಿಣ ಭಾರತ ರಾಜ್ಯಗಳಿಗೆ ಈ ಬಾರಿಯೂ ವರುಣನ ಕಂಟಕ ಎದುರಾಗುವ ಸಾಧ್ಯತೆ ಇದೆ.
ಭಾರತೀಯ ಹವಮಾನ ಇಲಾಖೆ ಈ ವಿಷಯ ತಿಳಿಸಿದ್ದು, ಮಲೇಷ್ಯಾ ಈ ಚಂಡಮಾರುತಕ್ಕೆ `ಟೌಕಟೆ’ ಎಂದು ನಾಮಕರಣ ಮಾಡಿದೆ. ಹವಾಮಾನ ವೈಪರಿತ್ಯದಿಂದ ಈ ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ಜೂನ್ 1 ರಿಂದ ಮುಂಗಾರು ಕೇರಳವನ್ನು ಪ್ರವೇಶಿಸುವ ಸಾಧ್ಯತೆ ಇದ್ದು, ಈ ಬಾರಿ ಸಹಜವಾಗಿ ಶೇ.100ರಷ್ಟು ಮಳೆಯಾಗಲಿದೆ ಎಂದು ಈ ಹಿಂದೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.
ಮೇ 14ರಂದು ಬೆಳಿಗ್ಗೆ ಈ ಚಂಡಮಾರುತ ಸೃಷ್ಟಿಯಾಗಲಿದ್ದು, ಮೇ 16ರಂದು ದಕ್ಷಿಣ ಭಾರತದ ಕಡಲ ತೀರವನ್ನು ಪ್ರವೇಶಿಸುವ ಸಾಧ್ಯತೆ ಇದೆ. ಇದು ಉತ್ತರ ಭಾರತದ ಕಡೆ ತಿರುಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಟೌಕಟೆ ಚಂಡಮಾರುತ ಕ್ಷಣಕ್ಷಣಕ್ಕೂ ಬದಲಾಗುತ್ತಿದ್ದು, ಯಾವ ಕಡೆ ತಿರುಗುತ್ತದೆ ಎಂದು ಆರಂಭದಲ್ಲೇ ಊಹಿಸುವುದು ಕಷ್ಟವಾಗುತ್ತಿದೆ. ಇದೇ ವೇಳೆ ಓಮನ್ ಅಥವಾ ಪಾಕಿಸ್ತಾನ ಕಡೆ ತಿರುವ ಸಾಧ್ಯತೆಯೂ ಇದೇ ಎನ್ನಲಾಗಿದೆ.