ನಾಗಪುರ: ಗಡ್ಚಿರೋಲಿ ಜಿಲ್ಲೆಯ ಖೋಬ್ರಮೇಂಡಾ ಅರಣ್ಯ ಪ್ರದೇಶದಲ್ಲಿ ಐವರು ನಕ್ಸಲರು ಹತರಾಗಿದ್ದಾರೆ. ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಐವರು ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಅರಣ್ಯ ಪ್ರದೇಶದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನೋಡಿದ ಕೂಡಲೇ ನಕ್ಸಲೀಯರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದಾಗ ಅಲ್ಲಿಂದ ಅವರು ಕಾಲ್ಕಿತ್ತಿದ್ದಾರೆ.
ಒಂದು ಗಂಟೆಯ ಕಾಲ ನಡೆದ ಎನ್ ಕೌಂಟರ್ ನಲ್ಲಿ ಐವರು ನಕ್ಸಲೀಯರನ್ನು ಹತ್ಯೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಎನ್ ಕೌಂಟರ್ ಮುಗಿದ ನಂತರ ಮದ್ದು ಗುಂಡುಗಳೊಂದಿಗೆ ಐವರು ನಕ್ಸಲೀಯರ ಮೃತದೇಹವನ್ನು ವಶಕ್ಕೆ ಪಡೆಯಲಾಗಿದೆ. ಆದರೆ, ಅವರ ಗುರುತು ಪತ್ತೆಯಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.