ಸಾರಿಗೆ ನೌಕರರಿಗೆ ವೇತನ ಕೊಡದ ಸರಕಾರದ ವಿರುದ್ಧ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ದೂರು ನೀಡಲಾಗುವುದು ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಯಾಗಿ ಸ್ವತಃ ಯಡಿಯೂರಪ್ಪನವರೇ ವೇತನ ತಡೆಹಿಡಿಯಲು ಮುಂದಾಗಿರುವುದು ವಿಷಾದನೀಯ. ಪ್ರೀತಿ-ವಿಶ್ವಾಸದಿಂದ ರಾಜ್ಯವನ್ನು ಕಟ್ಟಬೇಕೇ ಹೊರತು ದಬ್ಬಾಳಿಕೆಯಿಂದಲ್ಲ. ಸರಕಾರದ ಬೆದರಿಕೆಗಳಿಗೆ ಬಗ್ಗುವ ಪ್ರಶ್ನೆಯೇ ಇಲ್ಲ ಎಂದರು.
ಸಾರಿಗೆ ನೌಕರರಿಗೆ ವೇತನ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಡಿಪೋ ಮ್ಯಾನೇಜರ್ ಗಳ ವಿರುದ್ಧ ಎಲ್ಲಾ ಠಾಣೆಗಳಲ್ಲಿ ದೂರು ದಾಖಲಿಸಲಾಗುವುದು. 6ನೇ ವೇತನ ಆಯೋಗ ಶಿಫಾರಸು ಮಾಡುವುದಾಗಿ ರಾಜ್ಯ ಸರಕಾರ ಈ ಹಿಂದೆ ಭರವಸೆ ನೀಡಿತ್ತು. ತಾನೇ ಕೊಟ್ಟ ಮಾತಿನಿಂದ ಹಿಂದೆ ಸರಿದಿದೆ. ಆದ್ದರಿಂದ ನಾವು ಹೋರಾಟವನ್ನು ಮುಂದುವರಿಸಲು ನಿರ್ಧರಿಸಿದ್ದೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.