ಬೆಂಗಳೂರು: ರಾಜ್ಯದ ಗ್ರಾಮೀಣ ಪ್ರದೇಶದ 20 ಯುವತಿಯರಿಗೆ ಉಚಿತವಾಗಿ ಐಎಎಸ್ ಕೋಚಿಂಗ್ ನೀಡುವ ದ ಐಎಎಸ್ ಹಬ್ ನ ನೂತನ ಯೋಜನೆ ಚಂದ್ರಲೇಔಟ್ ನಲ್ಲಿ ಆರಂಭವಾಗಿದೆ. ದೇಶದಲ್ಲೇ ಸಿವಿಲ್ ಸರ್ವೀಸ್ ಪರೀಕ್ಷೆಗಳಿಗೆ ಅತ್ಯುತ್ತಮ ಗುಣಮಟ್ಟದ ತರಬೇತಿಯನ್ನು ನೀಡಲಾಗುವ ದ ಐಎಎಸ್ ಹಬ್ ನ ಬೆಂಗಳೂರು ಶಾಖೆಯನ್ನು ಪಶು ವೈದ್ಯಕೀಯ ಇಲಾಖೆಯ ಕಾರ್ಯದರ್ಶಿ ಪಿ. ಮಣಿವಣ್ಣನ್, ನಿವೃತ್ತ ಡಿಜಿಪಿ ಶಂಕರ್ ಬಿದರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಡಾ ರವಿ ಸುರಪುರ, ಸೇಲಂ ನ ಪೊಲೀಸ್ ವರಿಷ್ಠಾಧಿಕಾರಿ ದೀಪಾ ಗಾಣಿಗೇರ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಿವೃತ್ತ ಡಿಜಿಪಿ ಶಂಕರ್ ಬಿದರಿ, ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಅತ್ಯುತ್ತಮ ಪ್ರತಿಭಾವಂತ ವಿದ್ಯಾರ್ಥಿಗಳು ಇದ್ದಾರೆ. ಈ ವಿದ್ಯಾರ್ಥಿಗಳಿಗೆ ಅಗತ್ಯ ಕೋಚಿಂಗ್ ಸಿಕ್ಕಲ್ಲಿ ಉನ್ನತ ಸಾಧನೆ ಮಾಡಬಲ್ಲರು. ಅವರಲ್ಲಿ ಹಲವರಿಗೆ ಆರ್ಥಿಕ ತೊಂದರೆಯಿಂದ ಬಳಲುತ್ತಿರುವವರಿಗೆ ಇಂತಹ ಉಚಿತ ಕೋಚಿಂಗ್ ಸೌಲಭ್ಯಗಳು ಬಹಳ ಅನುಕೂಲ ಮಾಡಿಕೊಡುತ್ತವೆ ಅಂತಾ ಹೇಳಿದರು.
ಪಶು ವೈದ್ಯಕೀಯ ಇಲಾಖೆ ಕಾರ್ಯದರ್ಶಿ ಪಿ ಮಣಿವಣ್ಣನ್ ಮಾತನಾಡಿ, ಕಠಿಣ ಪರಿಶ್ರಮದಿಂದ ಉನ್ನತ ಸಾಧನೆ ಮಾಡಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಉನ್ನತ ಪರೀಕ್ಷೆಗಳಿಗೆ ತಯಾರಾಗಲು ಅತ್ಯುತ್ತಮ ಸೌಲಭ್ಯಗಳು ದೊರಯುತ್ತಿವೆ. ಇದನ್ನು ಸದಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ದ ಐಎಎಸ್ ಹಬ್‌ನಿಂದ ಕೋಚಿಂಗ್ ಪಡೆದು 2019 ಐಎಎಸ್ ಪ್ರೋಬೇಷನರಿ ಅಧಿಕಾರಿ ರಿತಿಕಾ ಜಿಂದಾಲ್ ಮಾತನಾಡಿ, ಐಎಎಸ್ ಹಬ್ ಕೋಚಿಂಗ್ ಕ್ಲಾಸ್ ನಿಂದ ಹಲವಾರು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಕೋಚಿಂಗ್ ನೀಡಲಾಗುತ್ತದೆ. ಅಲ್ಲದೆ, ಹಲವಾರು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ಕೋಚಿಂಗ್ ಕೂಡಾ ನೀಡುತ್ತಿದೆ ಎಂದರು.