ಮೇ 10ರಿಂದ ರಾಜ್ಯಾದ್ಯಂತ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ಹಾಕಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ 1ರಿಂದ ಆರಂಭವಾಗಬೇಕಿದ್ದ ಕೋವಿಡ್ ಲಸಿಕೆ ನೀಡುವ ಲಸಿಕೆ ಕೊರತೆಯಿಂದ ಮುಂದೂಡಲಾಗಿದ್ದು, ಇದೀಗ ಮೇ 18ರಿಂದ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದರು.
ಬೆಂಗಳೂರಿನಲ್ಲಿ ಕೆಸಿ ಜನರಲ್ ಆಸ್ಪತ್ರೆ, ನಿಮ್ಹಾನ್ಸ್, ಜಯದೇವ, ಜಯನಗರ ಆಸ್ಪತ್ರೆ, ಸರ್ ಸಿವಿ ರಾಮನ್ ಜನರಲ್ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುವುದು. ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುವುದು ಎಂದು ಅವರು ತಿಳಿಸಿದರು.
ಕೇಂದ್ರದಿಂದ ಕರ್ನಾಟಕಕ್ಕೆ ಇದೀಗ 3.5 ಲಕ್ಷ ಡೋಸ್ ಲಸಿಕೆ ತಲುಪಿದೆ. ಇದರಿಂದ ಒಟ್ಟಾರೆ 6.5 ಲಕ್ಷ ಡೋಸ್ ಲಸಿಕೆ ತಲುಪಿದಂತಾಗಿದೆ. 99,58,190 ಡೋಸ್ ಕೋವಿಶೀಲ್ಡ್ ಹಾಗೂ 10,91,280 ಕೋವ್ಯಾಕ್ಸಿನ್ ಸೇರಿದಂತೆ 1,10,49,580 ಲಸಿಕೆಗಳು ಆಗಮಿಸಿದಂತಾಗಿದೆ ಎಂದು ಸುಧಾಕರ್ ಅಂಕಿ ಅಂಶ ನೀಡಿದರು.