ಕೊರೊನಾ ಸೋಂಕಿತ ಮಗಳಿಗೆ 15 ದಿನ ಚಿಕಿತ್ಸೆ ನೀಡಿದ್ದಕ್ಕಾಗಿ ಖಾಸಗಿ ಆಸ್ಪತ್ರೆ 7.5 ಲಕ್ಷ ರೂ. ಬಿಲ್ ಮಾಡಿದ್ದರೂ ಬದುಕಲಿಲ್ಲ ಎಂಬ ಸುದ್ದಿ ಕೇಳಿ ತಾಯಿ ಹೃದಯಘಾತದಿಂದ ಮೃತಪಟ್ಟಿದ್ದಾರೆ. ಈ ಮೂಲಕ ತಾಯಿ-ಮಗಳು ಸಾವಿನ ಒಂದಾದ ಹೃದಯವಿದ್ರಾವಕ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ ಬಾಗೂರು ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ಚನ್ನರಾಯಪಟ್ಟಣದ ಖರ್ಬಸ್ತಾನದ 45 ವರ್ಷದ ನಿವಾಸಿ ಮುಸ್ಲಿಂ ಮಹಿಳೆ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ದಾಖಲಾಗಿದ್ದರು. 4 ದಿನ ಚಿಕಿತ್ಸೆ ನೀಡಿ ಗುಣಮುಖಿತರಾಗಿದ್ದಾರೆ ಎಂದು 4 ಲಕ್ಷ ರೂ. ಬಿಲ್ ಮಾಡಿದ್ದಾರೆ. ಆದರೆ ಕೂಡಲೇ ರೋಗ ಉಲ್ಬಣ ಆಗಿದೆ ಎಂದು ಮತ್ತೆ ಐಸಿಯುಗೆ ವೈದ್ಯರು ದಾಖಲಿಸಿಕೊಂಡಿದ್ದಾರೆ.
ಹತ್ತು ದಿನಗಳ ಕಾಲ ಐಸಿಯುನಲ್ಲಿ ಸಾವು ಬದುಕಿನ ನಡುವೆ ಹೋರಾಡಿದ ಮಹಿಳೆ ಮೃತಪಟ್ಟಿದ್ದಾಳೆ. ಮಗಳ ಸಾವಿನ ಸುದ್ದಿ ಕೇಳಿ ತಾಯಿಯೂ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.
ಮಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಹೃದಯಾಘಾತದಿಂದ ತಾಯಿ ನಿಧನರಾಗಿದ್ದು, ಖಾಸಗಿ ಆಸ್ಪತ್ರೆಯ ಬಿಲ್ ಪಾವತಿಸಲಾಗದೆ ಬಡ ಕುಟುಂಬ ಪರದಾಟ ನಡೆಸಿದೆ.
15 ದಿನ ಚಿಕಿತ್ಸೆ ನೀಡಿದ್ದಕ್ಕಾಗಿ ಖಾಸಗಿ ಆಸ್ಪತ್ರೆ 7.5 ಲಕ್ಷ ರೂ.ಬಿಲ್ ಮಾಡಿದ್ದು, ಈಗಾಗಲೇ 3 ಲಕ್ಷ ಪಾವತಿಸಿದ್ದಾರೆ. ಉಳಿದ 4.5 ಲಕ್ಷ ಬಿಲ್ ಪಾವತಿಸಿ ಶವ ಕೊಂಡೊಯ್ಯುವಂತೆ ಆಸ್ಪತ್ರೆ ಸಿಬ್ಬಂದಿ ತಾಕೀತು ಮಾಡಿದೆ.
ಬಿಲ್ ಪಾವತಿಸಲಾಗದೆ ಮೃತ ಮಹಿಳೆಯ 17 ವರ್ಷದ ಪುತ್ರ ಪರದಾಡಿದ್ದು, ಕೊನೆಯ ಶವಸಂಸ್ಕಾರ ನಂತರ ಹಣ ಪಾವತಿಸುವ ಭರವಸೆ ನೀಡಿ ಶವವನ್ನು ಪಡೆದಿದ್ದು, ತಾಯಿ ಹಾಗೂ ಅಜ್ಜಿಯ ಶವಸಂಸ್ಕಾರವನ್ನು ಒಟ್ಟಿಗೆ ಮಾಡಿದ್ದಾನೆ.