ಬೆಂಗಳೂರು: ಕ್ಯಾಬ್ ಚಾಲಕರ ರಕ್ಷಣೆಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಸರ್ಕಾರ ಕ್ಯಾಬ್ ಗಳ ದರ ಸಮರದತ್ತ ಕೂಡಲೇ ಗಮನಹರಿಸಬೇಕು.
ಈ ಬಗ್ಗೆ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಬಾಡಿಗೆ ದೊರೆಯದೇ ಆರ್ಥಿಕ ಸಂಕಷ್ಟಕ್ಕೀಡಾಗಿದ್ದ ಕೆಎಸ್‌ಟಿಡಿಸಿ ಕ್ಯಾಬ್ ಚಾಲಕ ಪ್ರತಾಪ್ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಮಧ್ಯರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ. ಪ್ರತಾಪ್ ಅವರ ಸಾವಿನೊಂದಿಗೆ ಕೆಎಸ್‌ಟಿಡಿಸಿ ಚಾಲಕರ ಸಮಸ್ಯೆಗಳು ತೆರೆದುಕೊಂಡಿವೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಕೆಎಸ್‌ಟಿಡಿಸಿ ಕ್ಯಾಬ್‌ಗಳು ದರ ನಿಯಮ ಪಾಲಿಸುತ್ತಿದ್ದರೆ, ಖಾಸಗಿ ಕ್ಯಾಬ್‌ಗಳು 9ಕ್ಕೆ ಗ್ರಾಹಕರನ್ನು ಸೆಳೆಯುತ್ತಿವೆ. ಹೀಗಾಗಿ, ಕೆಎಸ್‌ಟಿಡಿಸಿ ಕ್ಯಾಬ್‌ಗಳಿಗೆ ಗ್ರಾಹಕರೇ ಇಲ್ಲದಂತಾಗಿದೆ. ಚಾಲಕರು ಸಮಸ್ಯೆಗೆ ಸಿಲುಕಿದ್ದಾರೆ. ಇದರ ಜೊತೆಗೆ ವಿಮಾನ ನಿಲ್ದಾಣದ ಪಾರ್ಕಿಂಗ್‌ನಲ್ಲೂ ನಡೆಯುತ್ತಿರುವ ರಾಜಕೀಯ ಚಾಲಕರ ಕೊರಳು ಹಿಂಡುತ್ತಿದೆ ಎಂದು ಆರೋಪಿಸಿದ್ದಾರೆ.
ಸರ್ಕಾರ ದರ ಸಮರದತ್ತ ಕೂಡಲೇ ಗಮನಹರಿಸಬೇಕು. ನಿಯಮ ಪಾಲಿಸದೇ ಮಾರುಕಟ್ಟೆಯಲ್ಲಿ ಅನಗತ್ಯ ಪೈಪೋಟಿ ಸೃಷ್ಟಿ ಮಾಡುತ್ತಿರುವ, ಆ ಮೂಲಕ ಅಮಾಯಕ ಚಾಲಕರ ಪ್ರಾಣ ಕಸಿಯುತ್ತಿರುವ ಖಾಸಗಿ ಕಂಪನಿಗಳಿಗೆ ಎಚ್ಚರಿಕೆ ನೀಡಬೇಕು. ಅದರ ಮೂಲಕ ಅಮಾಯಕ, ಶ್ರಮಜೀವಿ ಕ್ಯಾಬ್ ಚಾಲಕರ ರಕ್ಷಣೆಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ನಾನು ಆಗ್ರಹಿಸುತ್ತೇನೆ ಎಂದು ಟ್ವೀಟ್ ಮೂಡಿದ್ದಾರೆ.