ನವದೆಹಲಿ: ಭಾರತಕ್ಕೆ ಮತ್ತೆ ಮೂರು ರಫೇಲ್ ಯುದ್ಧವಿಮಾನಗಳು ಇಂದು ಆಗಮಿಸಲಿವೆ. ಫ್ರಾನ್ಸ್ನಿಂದ ಆಗಮಿಸುತ್ತಿರುವ ಯುದ್ಧವಿಮಾನಗಳಿಗೆ ಆಗಸದಲ್ಲಿಯೇ ಇಂಧನ ತುಂಬಿಸಲು ಯುಎಇ ವಾಯುಸೇನೆ ಸಹಾಯ ಮಾಡಲಿದೆ.
ಇಂದು ರಾತ್ರಿಯೊಳಗೆ ವಿಮಾನಗಳು ಭಾರತಕ್ಕಾಗಮಿಸಲಿವೆ. ಅಂಬಾಲಾದ ಭಾರತೀಯ ವಾಯುಸೇನಾ ನೆಲೆಯಲ್ಲಿರುವ ಗೋಲ್ಡನ್ ಆ್ಯರೋಸ್ ಸ್ಕ್ವಾಡ್ರನ್ಗೆ ಸೇರ್ಪಡೆಯಾಗಲಿವೆ. ಮುಂದಿನ ತಿಂಗಳು ಮತ್ತೊಂದು ಹಂತದ ರಫೇಲ್ ಯುದ್ಧವಿಮಾನಗಳು ಭಾರತಕ್ಕೆ ಬರಲಿವೆ.
ಒಪ್ಪಂದದ ಪ್ರಕಾರ 2022ರೊಳಗೆ ಒಟ್ಟು 36 ವಿಮಾನಗಳನ್ನು ಭಾರತಕ್ಕೆ ತಲುಪಿಸಲಾಗುತ್ತದೆ ಎಂದು ಫ್ರಾನ್ಸ್ ರಾಯಭಾರಿ ಮಾಹಿತಿ ನೀಡಿದ್ದಾರೆ. ಕಳೆದ ಜುಲೈನಲ್ಲಿ ರಫೇಲ್ ಯುದ್ಧವಿಮಾನಗಳು ಅಧಿಕೃತವಾಗಿ ಭಾರತೀಯ ವಾಯುಸೇನೆಯನ್ನು ಸೇರ್ಪಡೆಯಾದವು.
ಸದ್ಯ ಪೂರ್ವ ಲಡಾಖ್ ಸೇರಿದಂತೆ ಹಲವು ಇಕ್ಕಟ್ಟಿನ ಪ್ರದೇಶಗಳಲ್ಲಿ ಗಸ್ತು ವಹಿಸುವ ಕಾರ್ಯಾಚರಣೆಯನ್ನು ನಡೆಸುತ್ತಿವೆ. ರಫೇಲ್ ಯುದ್ಧವಿಮಾನಗಳ ಮೂಲಕ ನೆಲ ಮತ್ತು ಸಾಗರಗಳಲ್ಲಿ ದಾಳಿ ನಡೆಸಬಹುದು.