ರಾಯಚೂರು : ಉಪಚುನಾವಣೆ ಕರ್ತವ್ಯಕ್ಕೆ ಹಾಜರಾದ ಶಿಕ್ಷಕರೊಬ್ಬರು ಕೊರೊನಾನಿಂದ ಸಾವನ್ನಪ್ಪಿರುವ ದುರ್ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಏಪ್ರಿಲ್ 17 ರಂದು ನಡೆದ ಮಸ್ಕಿ ವಿಧಾನಸಭೆಯ ಉಪಚುನಾವಣೆಯ ಕರ್ತವ್ಯಕ್ಕೆ ಹಾಜರಾಗಿದ್ದ ದೇವದುರ್ಗ ತಾಲೂಕಿನ ಸಂಕೇಶ್ವರಹಾಳ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕ ಕಟ್ಟೆಪ್ಪ(40) ಸಾವನ್ನಪ್ಪಿದ ದುರ್ದೈವಿಯಾಗಿದ್ದಾರೆ.
ಚುನಾವಣೆಯ ಕರ್ತವ್ಯ ಮುಗಿಸಿಕೊಂಡು ಬಂದ ನಂತರ, ದೇಹದಲ್ಲಿ ಕೊವಿಡ್ ಲಕ್ಷಣಗಳು ಕಂಡುಬಂದಿದ್ದರಿಂದ, ಪರೀಕ್ಷೆಗೆ ಒಳಪಟ್ಟಾಗ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ರಾಯಚೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದರು, ಇಂದು ಚಿಕಿತ್ಸೆಗೆ ದೇಹ ಸ್ಪಂದಿಸದೆ ಕೊನೆ ಉಸಿರು ಎಳೆದಿದ್ದಾರೆ.
ಮಸ್ಕಿ ಉಪ ಚುನಾವಣೆಯ ಕರ್ತವ್ಯ ನಿರ್ವಹಿಸಿದ ಸಾಕಷ್ಟು ಸಿಬ್ಬಂದಿಗಳು ಕೂಡ ಕೊರೊನಾ ದೃಢಪಟ್ಟಿದ್ದು, ಕ್ಷೇತ್ರದ ಜನತೆಯಲ್ಲಿಯು ಕೊರೊನಾ ಹೆಚ್ಚಾಗಿ ಕಂಡುಬರುತ್ತಿದೆ. ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿಗಳು ಮತ್ತು ಕ್ಷೇತ್ರದ ಜನತೆಯಲ್ಲಿ ಆತಂಕ ಹೆಚ್ಚಾಗಿದೆ.