ರಾಜಧಾನಿ ಬೆಂಗಳೂರಿನಲ್ಲಿ ಗನ್ ಮಾಫಿಯಾ ಕಾಲಿಟ್ಟದ್ದು, ಕಳ್ಳೆಪುರಿಯಂತೆ ಬಸ್ ನಿಲ್ದಾಣದಲ್ಲಿ ಗನ್ ಮಾರಾಟಕ್ಕೆ ಯತ್ನಿಸುತ್ತಿದ್ದ ಘಟನೆ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ಪತ್ತೆಯಾಗಿದೆ.
ಮಹಾರಾಷ್ಟ್ರದಿಂದ ಅನುಮತಿ ಇಲ್ಲದೇ ಅಕ್ರಮವಾಗಿ ಗನ್ ಗಳು ಬೆಂಗಳೂರಿಗೆ ಬರುತ್ತಿದ್ದು, ಈ ಬಗ್ಗೆ ಮಾಹಿತಿ ಕಲೆ ಹಾಕಿದ ಬ್ಯಾಟರಾಯನಪುರ ಪೊಲೀಸರು ಇಬ್ಬರನ್ನು ಬಂಧಿಸಿ ಅಕ್ರಮವಾಗಿ ಹೊಂದಿದ್ದ ಒಂದು ಪಿಸ್ತೂಲ್ ಮತ್ತು 5 ಸುತ್ತು ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಸ್ಯಾಟಲೈಟ್ ಬಸ್ ಸ್ಟಾಪ್ ಬಳಿ ಅಕ್ರಮವಾಗಿ ಬ್ಲಾಕ್ ಬ್ಯಾಗ್ ನ ಒಳಗೆ ಮತ್ತೊಂದು ವೈಟ್ ಬ್ಯಾಗ್ ನಲ್ಲಿ ಪಿಸ್ತೂಲ್ ಇಟ್ಟುಕೊಂಡಿದ್ದ ಆರೋಪಿಗಳು ಮಾರಾಟಕ್ಕೆ ಯತ್ನಿಸಿದ್ದರು.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮೂಲದ ರಾಹುಲ್ ಸತೀಶ್ ಮಾನೆ ಮತ್ತು ಕೊಲ್ಲಾಪುರ ಜಿಲ್ಲೆಯ ರಫೀಕ್ ದಸ್ತಗಿರ್ ನಧಾಫ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಗರದ ಹಲವೆಡೆ ಅಕ್ರಮವಾಗಿ ಗನ್ ಮಾರಾಟ ಮಾಡಲಾಗುತ್ತಿದೆ ಎಂದು ಪೊಲೀಸರು ಶಂಕಿಸಿದ್ದು, ಈ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ.