ವಾಷಿಂಗ್ಟನ್: ಭಾರತೀಯ ಮೂಲದ ದಂಪತಿ ಅಮೆರಿಕದಲ್ಲಿ ನಿಗೂಢವಾಗಿ ಸಾವಿಗೀಡಾಗಿದ್ದಾರೆ. ಬಾಲ್ಕನಿಯಲ್ಲಿ ದಂಪತಿಯ ನಾಲ್ಕು ವರ್ಷದ ಮಗು ಅಳುತ್ತಿರುವುದರಿಂದ ಈ ಪ್ರಕರಣ ಬೆಳಕಿಗೆ ಬಂದಿದೆ.
ನ್ಯೂಜರ್ಸಿಯ ನಾರ್ಥ್ ಅರ್ಲಿಂಗ್ಟನ್ ಅಪಾರ್ಟ್ಮೆಂಟ್ನಲ್ಲಿ ದಂಪತಿಯ ಮೃತದೇಹ ಚಾಕು ಇರಿದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಮೃತರನ್ನು ಬಾಲಾಜಿ ಭಾರತ್ ರುದ್ರಾವರ್ (32) ಮತ್ತು ಆರತಿ ಬಾಲಾಜಿ ರುದ್ರಾವರ್ (30) ಎಂದು ಗುರುತಿಸಲಾಗಿದೆ.
ಇನ್ನು ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಬಾಲಾಜಿ ತಂದೆ ಭರತ್ ರುದ್ರಾವರ್, ನಮ್ಮ ಮೊಮ್ಮಗಳು ಬಾಲ್ಕನಿಯಲ್ಲಿ ಅಳುತ್ತಿರೋದನ್ನ ಕಂಡ ನೆರೆಹೊರೆಯವರು ಸ್ಥಳೀಯ ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಮನೆಯ ಒಳಗೆ ಹೋದ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ.
ನನ್ನ ಸೊಸೆ 7 ತಿಂಗಳ ಗರ್ಭಿಣಿ ಆಗಿದ್ದಳು. ನಾವು ಮತ್ತೊಮ್ಮೆ ಅಮೆರಿಕ ಪ್ರವಾಸ ಮಾಡಲು ಪ್ಲಾನ್ ಮಾಡಿಕೊಂಡಿದ್ದೆವು. ಅಷ್ಟರಲ್ಲಿ ಮಗ ಮತ್ತು ಸೊಸೆ ಮೃತಪಟ್ಟಿದ್ದಾರೆ. ಇಬ್ಬರು ಖುಷಿಯಾಗಿಯೇ ಇದ್ದರು ನೆರೆಮನೆಯವರೊಂದಿಗೂ ಚೆನ್ನಾಗಿಯೇ ಇದ್ದರು.
ಆದರೆ, ಯಾಕೆ ಹೀಗಾಯಿತು ಎಂಬುದು ನಮಗೂ ತಿಳಿಯುತ್ತಿಲ್ಲ. ಇಬ್ಬರ ಮೃತದೇಹ ತಲುಪಲು ಸುಮಾರು 8 ರಿಂದ 10 ದಿನಗಳು ಆಗುತ್ತದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ನನ್ನ ಮೊಮ್ಮಗಳು ಸದ್ಯ ನನ್ನ ಮಗನ ಸ್ನೇಹಿತನ ಮನೆಯಲ್ಲಿದ್ದಾಳೆ ಎಂದು ಮೃತನ ತಂದೆ ಮಾಹಿತಿ ನೀಡಿದ್ದಾರೆ.
ಬಾಲಾಜಿ ರುದ್ರಾವರ್ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅಂಬಾಜೋಗೈ ನಿವಾಸಿ. ಐಟಿ ವೃತ್ತಿಪರನಾಗಿದ್ದ ಬಾಲಾಜಿ 2014ರ ಡಿಸೆಂಬರ್ನಲ್ಲಿ ಮದುವೆ ಆದ ಬಳಿಕ 2015ರಲ್ಲಿ ಪತ್ನಿ ಜೊತೆಗೆ ಅಮೆರಿಕಕ್ಕೆ ತೆರಳಿದ್ದರು.