ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕಾಲಿಟ್ಟ ಮೊದಲ ಪಂದ್ಯದಲ್ಲೇ ಸಿಕ್ಸರ್ ಸಿಡಿಸುವ ಮೂಲಕ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ ವೆಲ್ 1079 ದಿನಗಳ ಸಿಕ್ಸರ್ ಬರ ನೀಗಿಸಿಕೊಂಡಿದ್ದಾರೆ.
ಸ್ಫೋಟಕ ಬ್ಯಾಟಿಂಗ್ ಗೆ ಹೆಸರಾಗಿರುವ ಮ್ಯಾಕ್ಸ್ ವೆಲ್ ಕಳೆದ ವರ್ಷ ಒಂದೂ ಸಿಕ್ಸರ್ ಸಿಡಿಸಿರಲಿಲ್ಲ. 2020ರಲ್ಲಿ ಮ್ಯಾಕ್ಸ್ ವೆಲ್ 13 ಪಂದ್ಯಗಳಿಂದ ಕೇವಲ 108 ರನ್ ಗಳಿಸಿದ್ದು ಒಂದೂ ಸಿಕ್ಸರ್ ಬಾರಿಸಿರಲಿಲ್ಲ. ಕಳಪೆ ಪ್ರದರ್ಶನದಿಂದಾಗಿ ಪಂಜಾಬ್ ತಂಡ ಮ್ಯಾಕ್ಸ್ ವೆಲ್ ಅವರನ್ನು ಕೈಬಿಟ್ಟಿತ್ತು.
ಆದರೆ ಆರ್ ಸಿಬಿ ದುಬಾರಿ ಬೆಲೆಗೆ ಖರೀದಿ ಮಾಡಿ ಅಚ್ಚರಿ ಮೂಡಿಸಿದರೂ ಮ್ಯಾಕ್ಸ್ ವೆಲ್ ಅದನ್ನು ಮೊದಲ ಪಂದ್ಯದಲ್ಲೇ ಸಮರ್ಥಿಸಿಕೊಂಡರು. ಅಲ್ಲದೇ 28 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಸೇರಿದ 39 ರನ್ ಗಳಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
ಹರಾಜಿನಲ್ಲಿ ಮ್ಯಾಕ್ಸ್ ವೆಲ್ ಅವರನ್ನು ಆರ್ ಸಿಬಿ ಖರೀದಿಸಿದ್ದಕ್ಕೆ 10 ಕೋಟಿಯ ಚೀರ್ ಲೀಡರ್ ಎಂದು ವೀರೇಂದ್ರ ಸೆಹ್ವಾಗ್ ಲೇವಡಿ ಮಾಡಿದ್ದರು. ಆದರೆ ಮ್ಯಾಕ್ಸ್ ವೆಲ್ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯದಲ್ಲೇ 100 ಮೀ. ದೂರ ಹೋಗಿ ಚಿಮ್ಮುವಂತೆ ಸಿಕ್ಸರ್ ಸಿಡಿಸಿದರು. ಮ್ಯಾಕ್ಸ್ ವೆಲ್ ಅಬ್ಬರ ಕಂಡು ಸ್ವತಃ ವಿರಾಟ್ ಕೊಹ್ಲಿಯೇ ಅಚ್ಚರಿ ವ್ಯಕ್ತಪಡಿಸಿದರು.
ಇನಿಂಗ್ಸ್ ನ 11ನೇ ಓವರ್ ನಲ್ಲಿ ಕೃನಾಲ್ ಪಾಂಡ್ಯ ಅವರ ಮೊದಲ ಎಸೆತದಲ್ಲಿ ಮ್ಯಾಕ್ಸ್ ವೆಲ್ ಸಿಡಿಸಿದ ಸಿಕ್ಸರ್ ಚೆಪಾಕ್ ಕ್ರೀಡಾಂಗಣದ ಮೈದಾನದ ಹೊರಗೆ ಹೋಗಿ ಬಿತ್ತು.
ಪಂದ್ಯದ ನಡುವೆ ನಾನು ಕೊಹ್ಲಿಗೆ ಹೇಳಿದೆ. ಕಳೆದ ವರ್ಷ ಒಂದೂ ಸಿಕ್ಸರ್ ಬಾರಿಸಿರಲಿಲ್ಲ ಅಂತ. ಮತ್ತೊಂದು ತುದಿಯಲ್ಲಿ ನಾಯಕ ಆಡುತ್ತಿದ್ದರಿಂದ ನನ್ನಲ್ಲಿ ವಿಶ್ವಾಸ ಹೆಚ್ಚಾಯಿತು ಎಂದು ಮ್ಯಾಕ್ಸ್ ವೆಲ್ ತಮ್ಮ ಪ್ರದರ್ಶನದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.