ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕಾವಿನ ನಡುವೆಯೇ ಟಿಎಂಸಿ ನಾಯಕರ ಆಡಿಯೋ ತುಣುಕೊಂದು ಬಿಡುಗಡೆಯಾಗುವ ಮೂಲಕ ಸುದ್ದಿ ಮಾಡಿದೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ ಎಂದು ಟಿಎಂಸಿ ಪರ ತಂತ್ರಗಾರ ಪ್ರಶಾಂತ್ ಕಿಶೋರ್ ಮಾತನಾಡಿದ ಆಡಿಯೋ ವೈರಲ್ ಆಗಿದೆ. ಪ್ರಶಾಂತ್ ಕಿಶೋರ್ ಮಾತನಾಡಿರುವ ಆಡಿಯೋವನ್ನು ಬಿಜೆಪಿ ನಾಯಕ ಅಮಿತ್ ಮಾಲ್ವಿಯಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಟಿಎಂಸಿ ಆಂತರಿಕ ಸಮೀಕ್ಷೆಯು, ಬಿಜೆಪಿ ಗೆಲ್ಲುತ್ತದೆ ಎಂದು ಹೇಳುತ್ತಿದೆ. ಬಿಜೆಪಿಗೆ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಮತ ಬೀಳುತ್ತವೆ. ಪರಿಶಿಷ್ಟ ಜಾತಿ ಹಾಗೂ ಮತುವಾ ಜನಾಂಗದವರೆಲ್ಲರೂ ಬಿಜೆಪಿಗೆ ಮತ ಹಾಕುತ್ತಾರೆ ಎಂದು ಈ ಆಡಿಯೋ ಕ್ಲಿಪ್ನಲ್ಲಿ ಹೇಳಲಾಗಿದೆ.
ಈ ಸಂಬಂಧ ಪ್ರತಿಕ್ರಿಸಿರುವ ಪ್ರಶಾಂತ್ ಕಿಶೋರ್, ಕ್ಲಬ್‌ಹೌಸ್ ಚಾಟ್‌ನಲ್ಲಿ ನಡೆಯುತ್ತಿದ್ದ ಆಡಿಯೋ ಸಂವಾದದಲ್ಲಿ, ಜನಪ್ರಿಯತೆಯ ಮಾನದಂಡದಲ್ಲಿ ಪ್ರಧಾನಿ ಮೋದಿ ಹಾಗೂ ಮಮತಾ ಬ್ಯಾನರ್ಜಿ ಸರಿಸಮಾನರು. ಬಿಜೆಪಿ ತಮ್ಮದೇ ನಾಯಕರ ಮಾತುಗಳಿಗಿಂತ ನನ್ನ ಮಾತುಗಳ ಮೇಲೆ ನಂಬಿಕೆ ಇಡುತ್ತದೆ ಎಂಬುದನ್ನು ತಿಳಿದು ಸಂತೋಷವಾಯಿತು ಎಂದು ತಿರುಗೇಟು ನೀಡಿದ್ದಾರೆ.