ಆರಂಭಿಕ ಶಿಖರ್ ಧವನ್ ಅವರ ಅಜೇಯ ಅರ್ಧಶತಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ 7 ವಿಕೆಟ್ ಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ತಂಡವನ್ನು 20 ಓವರ್ ಗಳಲ್ಲಿ 6 ವಿಕೆಟ್ ಗೆ 166 ರನ್ ಕಲೆ ಹಾಕಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಡೆಲ್ಲಿ ಕ್ಯಾಪಿಟಲ್ಸ್ 17.4 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು. ಈ ಮೂಲಕ ಹಂಗಾಮಿ ನಾಯಕನಾಗಿ ಮಯಾಂಕ್ ಅಗರ್ ವಾಲ್ ಗಳಿಸಿದ ಅಜೇಯ 99 ರನ್ ವ್ಯರ್ಥಗೊಂಡಿತು.
ಡೆಲ್ಲಿ ತಂಡಕ್ಕೆ ಧವನ್ ಮತ್ತು ಪೃಥ್ವಿ ಶಾ ಮೊದಲ ವಿಕೆಟ್ ಗೆ 63 ರನ್ ಪೇರಿಸಿದರು. ಶಾ (39) ರನ್ ಗಳಿಸಿದರೆ, ಧವನ್ 47 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ಸೇರಿದ 69 ರನ್ ಸಿಡಿಸಿದರು. ಸ್ಟೀವನ್ ಸ್ಮಿತ್ (24), ರಿಷಭ್ ಪಂತ್ (14) ಮತ್ತು ಹೆಟ್ಮೆಯರ್ (16) ತಂಡವನ್ನು ಗೆಲುವಿನ ದಡ ಸೇರಿಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಪಂಜಾಬ್ ತಂಡವನ್ನು ಕೆ.ಎಲ್. ರಾಹುಲ್ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದ ಮಯಾಂಕ್ ಅಗರವ್ ವಾಲ್ 58 ಎಸೆತಗಳಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್ ಸೇರಿದ 99 ರನ್ ಬಾರಿಸಿ ಔಟಾಗದೇ ಉಳಿದರು.