ನಂದಿಗ್ರಾಮ ಕ್ಷೇತ್ರದ ಚುನಾವಣಾ ಫಲಿತಾಂಶ ನಾಟಕೀಯ ಬೆಳವಣಿಗೆಗೆ ಕಾರಣವಾಗಿದ್ದು, ಗೆದ್ದಿದ್ದಾರೆ ಎನ್ನಲಾದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಲುಂಡಿದ್ದಾರೆ ಎಂದು ಚುನಾವಣಾ ಆಯೋಗ ಘೋಷಿಸಿ ಅಚ್ಚರಿ ಮೂಡಿಸಿದೆ.
ಸಿಎಂ ಮಮತಾ ಬ್ಯಾನರ್ಜಿ ಅವರು ಬಿಜೆಪಿ ಅಭ್ಯರ್ಥಿ ಸುವೆಂದು ಅಧಿಕಾರಿ ವಿರುದ್ಧ ಸೋಲು ಕಂಡಿದ್ದಾರೆ. ಮೊದಲಿಗೆ ಮಾಧ್ಯಮಗಳಲ್ಲಿ ಮಮತಾ ಬ್ಯಾನರ್ಜಿ 1200 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಚುನಾವಣೆ ಆಯೋಗ ಅಧಿಕೃತವಾಗಿ ಫಲಿತಾಂಶ ಘೋಷಿಸಿದಾಗ ಮಮತಾ ಬ್ಯಾನರ್ಜಿ ಅವರು 1927 ಮತಗಳಿಂದ ಸೋಲು ಕಂಡಿದ್ದಾರೆ ಎಂದು ಘೋಷಿಸಲಾಯಿತು.
ನಂದಿಗ್ರಾಮ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ ಮಮತಾ ಬ್ಯಾನರ್ಜಿ, ನಾನು ಜನರ ತೀರ್ಪಿಗೆ ತಲೆ ಬಾಗುತ್ತೇನೆ. ನಂದಿಗ್ರಾಮದಲ್ಲಿ ನನ್ನ ಸೋಲು ಒಪ್ಪಿಕೊಳ್ಳುತ್ತೇನೆ. ಮೊದಲಿಗೆ ಚುನಾವಣಾ ಆಯೋಗ ನಾನು ಗೆದ್ದಿರುವುದಾಗಿ ಹೇಳಿತ್ತು. ಆದರೆ ಇದೀಗ 1927 ಮತಗಳ ಅಂತರದಿಂದ ಸೋತಿರುವುದಾಗಿ ಘೋಷಿಸಿದೆ. ಈ ಸಂಬಂಧ ನಾನು ನ್ಯಾಯಾಲಯದ ಮೊರೆ ಹೋಗುತ್ತೇನೆ ಎಂದರು.
ಬಂಗಾಳದಲ್ಲಿ ಟಿಎಂಸಿ ಅಭೂತಪೂರ್ವ ಸಾಧನೆ ಮಾಡಿದ್ದು 221 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದ್ದಾರೆ. 200 ಸ್ಥಾನ ಗೆಲ್ಲುತ್ತೇವೆ ಎಂದು ಬೀಗಿದ್ದ ಬಿಜೆಪಿ ಹೀನಾಯವಾಗಿ ಸೋಲುಂಡಿದೆ.