ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಕಡಿಮೆ ಆಗುತ್ತಿದ್ದು, ಲಾಕ್ ಡೌನ್ ಮುಂದುವರೆಸಿದ್ರೆ ಮತ್ತಷ್ಟು ಅನುಕೂಲ ಆಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೂ ಮನವರಿಕೆ ಮಾಡುತ್ತೇವೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬೆಂಗಳೂರು ನಾಗರೀಕನಾಗಿ ಲಾಕ್ ಡೌನ್ ಮುಂದುವರಿಕೆ ಆಗಬೇಕು ಅಂತ ಹೇಳುತ್ತೇನೆ. ನಾವು ಲಾಕ್ ಡೌನ್ ಬೇಕು ಅಂತ ಸಿಎಂಗೆ ಸಲಹೆ ಮಾಡುತ್ತೇವೆ. ಮಹಾರಾಷ್ಟ್ರ, ದೆಹಲಿಯ ಪ್ರಕರಣಗಳು ನಮ್ಮ ಮುಂದಿದೆ. ಅಲ್ಲಿ ಮೊದಲ ಅಲೆ ಬಂತು. ಅವರು ಲಾಕ್ ಡೌನ್ ವಿಸ್ತರಣೆ ಮಾಡಿದರು. ಅದನ್ನ ನಾವು ಅನುಸರಿಸುತ್ತೇವೆ ಎಂದರು.
ಸರ್ಕಾರದ ವಿರುದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ ವಿಚಾರಕ್ಕೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮನೆಯಲ್ಲಿ ಕುಳಿತು ಟ್ವೀಟ್ ಮಾಡುತ್ತಾರೆ. ನಾವು 24 ಗಂಟೆ ಜನರ ಜೊತೆ ಇದ್ದು, ಜನರ ಜೊತೆ ಓಡಾಡುತ್ತಿದ್ದೇವೆ. ಈ ಸಮಯದಲ್ಲಿ ರಾಜಕೀಯ ಮಾಡೋದು ಬೇಡ. ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಿದ್ದಾರೆ ಅಂತ ಜಗತ್ತಿಗೆ ಗೊತ್ತು. ಸಿದ್ದರಾಮಯ್ಯ ಎಲ್ಲಿದ್ದಾರೆ ಅಂದ್ರೆ ಟ್ವಿಟರ್ ನಲ್ಲಿ ಇದ್ದಾರೆ. ನಾವು, ನಮ್ಮ ಸಂಸದರು 24 ಗಂಟೆ ಕೆಲಸ ಮಾಡ್ತಿದ್ದೇವೆ. ಸಿದ್ದರಾಮಯ್ಯ ಅವರು ರಾಜಕೀಯ ಬಿಟ್ಟು ಸಹಕಾರ ಕೊಡಲಿ ಎಂದು ಸಿದ್ದರಾಮಯ್ಯ ವಿರುದ್ದ ಸಚಿವ ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.