ಮೊದಲೆರಡು ಪಂದ್ಯಗಳ ಗೆಲುವಿನಿಂದ ಬೀಗುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದ್ದು, ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ.
ಟೂರ್ನಿಯಲ್ಲಿ ಸೋಲರಿಯದ ಏಕೈಕ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಿರಾಟ್ ಕೊಹ್ಲಿ ಸಾರಥ್ಯದ ಆರ್ ಸಿಬಿಗೆ ಚೆನ್ನೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆದ್ದು ಹ್ಯಾಟ್ರಿಕ್ ಗೆಲುವು ಕಂಡ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಉಮೇದಿನಲ್ಲಿದೆ.
ಆರ್ ಸಿಬಿ ತಂಡದ ಗೆಲುವಿನಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಒಂದು ಅರ್ಧಶತಕ ಸೇರಿದಂತೆ 98 ರನ್ ಗಳಿಸಿರುವ ಮ್ಯಾಕ್ಸ್ ವೆಲ್ ಮೇಲೆ ತಂಡದ ಯಶಸ್ಸು ಅವಲಂಬಿಸಿದೆ. ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಮತ್ತು ದೇವದತ್ ಪಡಿಕಲ್ ನಿರೀಕ್ಷೆಗೆ ತಕ್ಕಂತೆ ಇನ್ನೂ ರನ್ ಗಳಿಸಬೇಕಿದೆ. ಅಲ್ಲದೇ ಕೇವಲ ನಾಲ್ವರು ಬ್ಯಾಟ್ಸ್ ಮನ್ ಗಳನ್ನು ತಂಡ ನೆಚ್ಚಿಕೊಂಡಿದ್ದು, ನಿಜವಾದ ಸವಾಲು ಇನ್ನೂ ಎದುರಿಸಬೇಕಿದೆ.
ಬೌಲಿಂಗ್ ನಲ್ಲಿ ಹರ್ಷಲ್ ಪಟೇಲ್, ಜೇಮಿನ್ಸನ್, ಮೊಹಮದ್ ಸಿರಾಜ್ ಮತ್ತು ಯಜುರ್ವೆಂದ್ರ ಚಾಹಲ್ ತಮ್ಮ ಮೇಲಿನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಬರುತ್ತಿದ್ದಾರೆ.
ಮತ್ತೊಂದೆಡೆ ಕೆಕೆಆರ್ ತಂಡ ಆಡಿದ ಎರಡು ಪಂದ್ಯಗಳಲ್ಲಿ ತಲಾ ಒಂದು ಸೋಲು ಗೆಲುವು ಕಂಡಿದೆ. ಆರ್ ಸಿಬಿ ವಿರುದ್ಧ ರಸೆಲ್ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದು, ಅವರ ಮೇಲೆ ಹೆಚ್ಚಿನ ಒತ್ತಡವಿದೆ.