ಮುಂಬೈ: ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ರಾಜ್ಯಾದ್ಯಂತ 15 ದಿನಗಳ ಕಾಲ ಜನತಾ ಕರ್ಪ್ಯೂವನ್ನು ಜಾರಿಗೊಳಿಸಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಂಗಳವಾರ ಆದೇಶ ಹೊರಡಿಸಿದ್ದಾರೆ. ಈ ನಿರ್ಬಂಧಗಳು ನಾಳೆ ರಾತ್ರಿ 8 ಗಂಟೆಯಿಂದ ಜಾರಿಗೆ ಬರಲಿವೆ.
ಕೋವಿಡ್‍ಗೆ ನಿಯಂತ್ರಣಕ್ಕಾಗಿ ನಾಳೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಸೆಕ್ಷನ್ 144 ಜಾರಿ ಮಾಡಲಾಗುತ್ತಿದೆ. ಆದರೆ, ಇದನ್ನು ಲಾಕ್‍ಡೌನ್ ಎಂದು ಹೇಳಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಾವು ನಿರಂತರವಾಗಿ ನಮ್ಮ ಆರೋಗ್ಯ ಮೂಲ ಸೌಕರ್ಯವನ್ನು ನವೀಕರಣಗೊಳಿಸುತ್ತಿದ್ದೇವೆ. ರಾಜ್ಯದಲ್ಲಿ ಆಮ್ಲಜನಕದ (ವೆಂಟಿಲೆಟರ್) ಕೊರತೆ ಇದೆ, ಆಸ್ಪತ್ರೆಗಳಲ್ಲಿ ಹಾಸಿಗೆಗಳು ಹಾಗೂ ಡೆಮ್‌ಡಿಸಿವಿರ್ ಬೇಡಿಕೆಯೂ ಹೆಚ್ಚಾಗಿದೆ. ಬೇರೆ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಆಮ್ಲಜನಕ ಪೂರೈಕೆಯಲ್ಲಿ ನೆರವು ನೀಡುವಂತೆ ವಿನಂತಿಸಲು ಪ್ರಧಾನಿಯೊಂದಿಗೆ ಮಾತನಾಡುತ್ತೇನೆ. ಆಮ್ಲಜನಕದ ಕೊರತೆ ಜತೆಗೆ ಅಗತ್ಯ ಪ್ರದೇಶಗಳಿಗೆ ಸಾಗಾಣಿಕೆ ಕೂಡ ತಲೆನೋವಾಗಿದೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಬಳಿ ವಾಯು ಸೇನೆಯ ನೆರವನ್ನು ಕೇಳಿದ್ದೇನೆ ಎಂದರು.
ಸಾರ್ವಜನಿಕ ಸಾರಿಗೆಗಳಾದ ಬಸ್ಸುಗಳು ಮತ್ತು ರೈಲುಗಳು ತುರ್ತು ಸೇವೆಗಳಿಗಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಪೆಟ್ರೋಲ್ ಪಂಪ್‌ಗಳು, ಸೆಬಿಗೆ ಸಂಬಂಧಿಸಿದ ಹಣಕಾಸು ಸಂಸ್ಥೆಗಳು ಮತ್ತು ನಿರ್ಮಾಣ ಕಾರ್ಯಗಳು ಸಹ ಮುಂದುವರಿಯುತ್ತವೆ. ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ಮುಚ್ಚುತ್ತವೆ. ಹೋಂ ಡೆಲಿವರಿಗೆ ಮಾತ್ರ ಅನುಮತಿಸಲಾಗುವುದು ಎಂದು ಅವರು ಹೇಳಿದರು.