ರಾಮನಗರ : ಭ್ರಷ್ಟಾಚಾರ ಎಲ್ಲೇ ಮೀರಿ ಹೋಗಿದೆ. ಹಾಗಾಗಿ ನನ್ನನ್ನ ಆರು ತಿಂಗಳು ಈ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮನವಿ ಮಾಡಿದ್ದಾರೆ.
ರಾಮನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬಸವ ಜಯಂತಿ ಆಚರಣೆ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಭ್ರಷ್ಟಾಚಾರ ಎಲ್ಲೇ ಮೀರಿ ಹೋಗಿದೆ, ಹಾಗಾಗಿ ನನಗೆ 6 ತಿಂಗಳ ಅಧಿಕಾರ ಕೊಡಿ, ನಾನು ಕೆಲಸ ಮಾಡಿಲ್ಲ ಅಂದರೆ ರಾಜೀನಾಮೆ ಕೊಡುತ್ತೇನೆ ಎಂದು ತಿಳಿಸಿದರು.
ಲಸಿಕೆ ವಿಚಾರವಾಗಿ ಎಲ್ಲರೂ ಸುಳ್ಳು ಹೇಳುತ್ತಿದ್ದಾರೆ. ಕೆಲವರು ಲಸಿಕೆ ಇದೇ ಅಂತಾರೆ, ಇನ್ನು ಕೆಲವರು ಇಲ್ಲ ಅಂತಾರೆ, ಇದು ನಮ್ಮ ರಾಜ್ಯದ ಈಗಿನ ಪರಿಸ್ಥಿತಿ ಆಗಿದೆ, ನನ್ನ ಪ್ರಕಾರ ಸರ್ಕಾರವೇ ಮನೆಮನೆಗೆ ಹೋಗಬೇಕು, ಪ್ರತಿ ಮನೆಗೆ ಹೋಗಿ ಜನರಿಗೆ ಲಸಿಕೆ ಹಾಕಬೇಕು ಅಂತಾ ರಾಜ್ಯ ಸರ್ಕಾರವನ್ನು ಒತ್ತಾಯ ಮಾಡಿದರು.
ಸದ್ಯದ ರಾಜಕೀಯ ವ್ಯವಸ್ಥೆಯ ಬಗ್ಗೆ ಮಾತನಾಡಿ ಅವರು ಬಸವಣ್ಣನವರು ಹುಟ್ಟಿದ್ದ ಈ ನಾಡಲ್ಲಿ ಈಗ ಭ್ರಷ್ಟಾಚಾರ ನಡೆಯುತ್ತಿದೆ. ರಾಜಕಾರಣಿಗಳು ಸಹ ಭ್ರಷ್ಟರಾಗಿದ್ದಾರೆ. ಕಳೆದ ಎರಡು ವರ್ಷದಿಂದ ರಾಜ್ಯದಲ್ಲಿ ಕೊರೊನಾ ಮಾರಿ ತಾಂಡವವಾಡುತ್ತಿದೆ.