ರಾಯಚೂರು: ಸಾರಿಗೆ ಇಲಾಖೆ ಸಾಲದಲ್ಲಿದೆ, ನೌಕರರು ಮುಷ್ಕರ ಕೈ ಬಿಟ್ಟು ಕರ್ತವ್ಯಕ್ಕೆ ಹಾಜರಾದರೆ ಮಾತುಕತೆ ನಡೆಸಲಾಗುವುದು ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಮಸ್ಕಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಕ್ ಡೌನ್ ಸಂದರ್ಭದಲ್ಲಿ ಆದಾಯ ಇಲ್ಲದಿದರೂ ಕೂಡ ಸಂಬಳ ನೀಡಿದ್ದೇವೆ. ಸಾಲ ಮಾಡಿ ಸಾರಿಗೆ ಇಲಾಖೆ ನಿರ್ವಹಿಸಲಾಗುತ್ತಿದೆ ಎಂದರು.
ತಮಿಳುನಾಡು, ಆಂಧ್ರ ಪ್ರದೇಶ ರಾಜ್ಯಗಳಲ್ಲಿ ಲಾಕ್ ಡೌನ್ ಅವಧಿಯಲ್ಲಿ ಸಾರಿಗೆ ನೌಕರರ ವೇತನ ಕಡಿತಗೊಳಿಸಿದ್ದರು. ಆದರೆ ರಾಜ್ಯದಲ್ಲಿ ಕೆಲಸ ಮಾಡದಿದ್ದರೆ ವೇತನ ನೀಡಲಾಗಿದೆ. ನೌಕರರು ಇದನ್ನು ನೆನಪಿನಲ್ಲಿಡಬೇಕು ಎಂದು ತಿಳಿಸಿದರು.
ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ನೌಕರರು ಮುಷ್ಕರ ನಡೆಸುವುದು ಸಾರ್ವಜನಿಕರಿಗೆ ಮಾಡುವ ಅವಮಾನ ಮಾಡಿದಂತೆ, ಮುಷ್ಕರ ಕೈ ಬಿಟ್ಟು ಕರ್ತವ್ಯಕ್ಕೆ ಹಾಜರಾಗಿ ಎಂದು ಸಚಿವರು ಮನವಿ ಮಾಡಿದರು.