ಕೋಲಾರ: ಖಾಸಗಿ ಕಾಂಪ್ಲೆಕ್ಸ್ ವೊಂದಕ್ಕೆ ಅಡ್ಡಲಾಗಿದೆ ಎಂದು ಬಡವರ ಪೆಟ್ಟಿಗೆ ಅಂಗಡಿಗಳನ್ನ, ಜೆಸಿಬಿ ಮೂಲಕ ಹಾನಿ ಮಾಡಿದ ಅಧಿಕಾರಿಗಳ ವಿರುದ್ದ ಶಾಸಕ ರಮೇಶ್ ಕುಮಾರ್ ಹರಿಹಾಯ್ದ ಘಟನೆ ಕೋಲಾರದಲ್ಲಿ ಜರುಗಿದೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಪುಂಗನೂರು ಕ್ರಾಸ್ ಬಳಿ ಈ ಘಟನೆ ಜರುಗಿದ್ದು, ಲೋಕೋಪಯೋಗಿ ಅಧಿಕಾರಿಗಳ ವಿರುದ್ದ ಶಾಸಕ ರಮೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶ್ರೀನಿವಾಸಪುರದ ಪುಂಗನೂರು ಕ್ರಾಸ್ ಬಳಿ, ರಸ್ತೆ ಬದಿಯಲ್ಲಿ ಪೆಟ್ಟಿಗೆ ಅಂಗಡಿಗಳನ್ನಿಟ್ಟುಕೊಂಡು ಬಡವರು ಜೀವನ ಸಾಗಿಸುತ್ತಿದ್ದರು. ಈ ವೇಳೆ ಪುಂಗನೂರು ಶಾಸಕರೊಬ್ಬರು ಇಲ್ಲಿ ಜಮೀನನ್ನ ತೆಗೆದುಕೊಂಡಿದ್ದು, ಅದಕ್ಕೆ ಹೊಂದಿಕೊಂಡಂತಿರುವ ಕಾಂಪ್ಲೆಕ್ಸ್ ಖರೀದಿ ಮಾಡುವ ಸಲುವಾಗಿ, ಕಾಂಪ್ಲೆಕ್ಸ್ ಗೆ ಅಡ್ಡಲಾಗಿದ್ದ ಪೆಟ್ಟಿಗೆ ಅಂಗಡಿಗಳನ್ನ ತೆರವುಗೊಳಿಸುವ ಸಲುವಾಗಿ, ಪುಂಗನೂರು ಶಾಸಕನೊಂದಿಗೆ ಶಾಮೀಲಾಗಿ ಅಧಿಕಾರಿಗಳು ಬಡವರ ಅಂಗಡಿಗಳನ್ನ ತೆರವುಗೊಳಿಸಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಲೋಕೋಪಯೋಗಿ ಇಲಾಖೆ ಅಧಿಕಾರಿಯಾದ ಜಗದೀಶ್ ಹಾಗು ಕಿರಿಯ ಅಧಿಕಾರಿಗಳು, ಏಕಾಏಕಿ ಬಡವರ ಮಳಿಗೆಗಳನ್ನ ತೆರವು ಮಾಡಿದ್ದು, ಅಂಗಡಿಗಳಲ್ಲಿದ್ದಂತಹ ವಸ್ತುಗಳನ್ನ ಸಹ ನಾಶಪಡಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್, ಅಧಿಕಾರಿಗಳ ಈ ಕೃತ್ಯಕ್ಕೆ ಛೀಮಾರಿ ಹಾಕಿದ್ದು, ಹತ್ತು ದಿನಗಳೊಳಗೆ ಬಡವರ ಅಂಗಡಿಗಳನ್ನ ಕಟ್ಟಿಕೊಡುವಂತೆ ಅಧಿಕಾರಿಗಳಿಗೆ ಸೂಚಿದರು. ಅಲ್ಲದೆ ಶ್ರೀಮಂತರ ಕಾಂಪ್ಲೆಕ್ಸ್ ಗಾಗಿ ಬಡವರ ಅಂಗಡಿಗಳನ್ನ ತೆರವುಗೊಳಿಸಿದ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿ, ಸಂತ್ರಸ್ತರನ್ನ ಸಮಾಧಾನಪಡಿಸಿದರು.