ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ 1 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ರದ್ದು ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
10 ಮತ್ತು 12ನೇ ತರಗತಿಯ ಪರೀಕ್ಷೆಗಳನ್ನ ರದ್ದು ಮಾಡಲಾಗಿಲ್ಲ. ಸದ್ಯಕ್ಕೆ ನಿಗದಿಯಂತೆ 10ನೇ ತರಗತಿ ಪರೀಕ್ಷೆ ಜೂನ್ 21ರಿಂದ ಪ್ರಾರಂಭವಾಗಲಿದೆ ಎಂದು ಶಿಕ್ಷಣ ಇಲಾಖೆ ಇಂದು ಹೊರಡಿಸಿದ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದೆ.
ಬೇಸಿಗೆ ರಜೆ ಮತ್ತು ಮುಂದಿನ ಶೈಕ್ಷಣಿಕ ವರ್ಷ:
ಒಂದರಿಂದ ಏಳನೇ ತರಗತಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಮೇ 1ರಿಂದ ಜೂನ್ 6ರವರೆಗೆ ಬೇಸಿಗೆ ರಜೆ ಎಂದು ಘೋಷಿಸಲಾಗಿದೆ. ಜೂನ್ 15ರಿಂದ 2021-22ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದೆ. ಹಾಗೆಯೇ, ಎಂಟು ಮತ್ತು ಒಂಬತ್ತನೇ ತರಗತಿಯ ಮಕ್ಕಳಿಗೆ ಮೇ 1ರಿಂದ ಜುಲೈ 14ರವರೆಗೆ ಬೇಸಿಗೆ ರಜೆ ಇದೆ. ಜುಲೈ 15ರಿಂದ ಮುಂದಿನ ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತದೆ ಎಂದು ತಿಳಿಸಲಾಗಿದೆ.
ಆದರೆ, ಈ ವೇಳಾಪಟ್ಟಿ ಕೇವಲ ತಾತ್ಕಾಲಿಕವಾಗಿದ್ದು, ಕೋವಿಡ್ ಸೋಂಕಿನ ಸ್ಥಿತಿಗತಿ ಅನುಸಾರ ಬದಲಾಗುವ ಸಾಧ್ಯತೆ ಇದೆ. ಜೂನ್ 21ರಿಂದ ಜುಲೈ 5ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆಗಳು ನಡೆಯಲಿದೆ ಎಂದು ಸ್ಪಷ್ಟಪಡಿಸಿದೆ.