ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ರಾಜ್ಯಪಾಲರು ಸರ್ವಪಕ್ಷ ಸಭೆ ಕರೆದಿದ್ದು, ರಾಜ್ಯಪಾಲರ ಸಭೆ ಮುಗಿದ ಬಳಿಕ. ರಾಜ್ಯದಲ್ಲಿ ಟಫ್ ರೂಲ್ಸ್ ಜಾರಿಯಾಗಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಇಂದು ಸಂಜೆ 4 ಗಂಟೆಗೆ ಸರ್ವಪಕ್ಷ ಸಭೆ ಕರೆದಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿರೋಧ ಪಕ್ಷದ ನಾಯಕರು, ಅಧಿಕಾರಿಗಳು, ಸಚಿವರುಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ಮಾತ್ರವಲ್ಲ ಬೇರೆ ರಾಜ್ಯಗಳಲ್ಲೂ ರಾಜ್ಯಪಾಲರೊಂದಿಗೆ ಚರ್ಚೆ ನಡೆಯುತ್ತಿದೆ, ಇದನ್ನು ಕಾಂಗ್ರೆಸ್ ಅಪಾರ್ಥ ಮಾಡಿಕೊಳ್ಳುವುದು ಬೇಡ, ಕೊರೊನಾ ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಿ ಎಂದು ಮನವಿ ಮಾಡಿದರು.
ಖಾಸಗಿಯವರಿಗೂ ಸರ್ಕಾರವೇ ಆಕ್ಸಿಜನ್ ಪೂರೈಸಲಿದೆ, ನಮ್ಮಲ್ಲಿ ಆಕ್ಸಿಜನ್ ಲಭ್ಯವಿದೆ ಆದರೆ ಖಾಲಿ ಸಿಲಿಂಡರ್ ಕೊರತೆ ಇದೆ ಎಂದಿದ್ದಾರೆ. ಬೆಂಗಳೂರಿಗೆ ಲಾಕ್ ಡೌನ್ ಅವಶ್ಯಕತೆ ಇಲ್ಲ. ಸರ್ಕಾರದ ಮುಂದೆಯೂ ಲಾಕ್ ಡೌನ್ ಪ್ರಸ್ತಾಪ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಲಾಕ್ ಡೌನ್ ನಿಂದ ಈಗಾಗಲೇ ತುಂಬಾ ಸಮಸ್ಯೆ ಆಗಿದೆ. ಲಾಕ್ ಡೌನ್ ಹೊರತು ಪಡಿಸಿ ಬಿಗಿ ಕ್ರಮ ಜಾರಿ ಮಾಡುವ ಕುರಿತು ಸರ್ಕಾರ ಚಿಂತನೆ ನಡೆಸಿದೆ. ಸಭೆಯ ನಂತರ ಬೆಂಗಳೂರಿಗೆ ಪ್ರತ್ಯೇಕ ಕಠಿಣ ನಿಯಮ ಜಾರಿ ಮಾಡುತ್ತೇವೆ ಎಂದು ಹೇಳಿದರು