ನವದೆಹಲಿ: ದೇಶದಲ್ಲಿ ಲಾಕ್ ಡೌನ್ ಅಗತ್ಯವಿಲ್ಲ. ನೈಟ್ ಕರ್ಫೂ ಗೆ ಆದ್ಯತೆ ಕೊಡಬೇಕು. ಪಾಸಿಟಿವ್ ರೇಟ್ ಶೇ 5ರಷ್ಟು ಕಡಿಮೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ದೇಶದಲ್ಲಿರುವ ಕೊರೋನಾ ಪರಿಸ್ಥಿತಿ ಕುರಿತು ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ವಿಡಿಯೋ ಕಾನ್ಫರೆನ್ಸ್ ನಡೆಸಿದರು. ಸಭೆ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 2-3 ವಾರ ಕಠಿಣ ನಿಯಮಗಳನ್ನು ಜಾರಿ ಮಾಡುವ ಅಗತ್ಯವಿದೆ. ನೈಟ್ ಕರ್ಫೂ ಅನ್ನು ಕೊರೋನಾ ಕರ್ಫೂ ಎಂದು ಭಾವಿಸೋಣ. ಲಸಿಕೆ ವ್ಯರ್ಥವಾಗುವುದನ್ನು ತಡೆಯೋಣ. ನಾಲ್ಕು ದಿನಗಳ ಕಾಲ ದೇಶದಲ್ಲಿ ವ್ಯಾಕ್ಸಿನ್ ಉತ್ಸವವನ್ನು ಮಾಡೋಣ ಎಂದರು.
ಮಹಾರಾಷ್ಟ್ರ, ಕರ್ನಾಟಕ, ಪಂಜಾಬ್, ಉತ್ತರ ಪ್ರದೇಶ, ದೆಹಲಿ, ಮಧ್ಯಪ್ರದೇಶದಲ್ಲಿ ಕೊರೋನಾ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆ ಕಳವಳ ವ್ಯಕ್ತಪಡಿಸಿದರು. ಕೋವಿಡ್ 19 ವಿರುದ್ಧ ಹೋರಾಡಲು ಮತ್ತೆ ಯುದ್ಧದ ಹಾದಿಯಲ್ಲಿ ಕೆಲಸ ಮಾಡುವ ಅವಶ್ಯಕತೆಯಿದೆ. ಎಲ್ಲಾ ಸವಾಲುಗಳ ಹೊರತಾಗಿಯೂ, ನಮಗೆ ಉತ್ತಮ ಅನುಭವ, ಸಂಪನ್ಮೂಲಗಳು ಮತ್ತು ಲಸಿಕೆ ಇದೆ ಎಂದು ಮೋದಿ ಹೇಳಿದರು.
ಕರ್ನಾಟಕದಲ್ಲಿ ಪರಿಸ್ಥಿತಿ ಗಂಭೀರವಾಗಿದೆ ಎನ್ನುವ ಅಂಶವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಧಾನಿಗಳ ಗಮನಕ್ಕೆ ತಂದಿದ್ದು, ಹೆಚ್ಚು ಅಪಾಯಕಾರಿಯಾಗಿರುವ 8 ಜಿಲ್ಲೆಗಳಲ್ಲಿ ಕೊರೋನಾ ಕರ್ಫ್ಯೂ ಜಾರಿ ಮಾಡುವ ಇಂಗಿತ ವ್ಯಕ್ತವಾಗಿದೆ. ಜೊತೆಗೆ ಇಡೀ ರಾಜ್ಯದಲ್ಲಿ ಉಪಚುನಾವಣೆ ಬಳಿಕ ಇನ್ನಷ್ಟು ಕಠಿಣ ನಿಯಮ ಜಾರಿಯಾಗಲಿದೆ.