ಮುಂಬೈ : ಮಹಾರಾಷ್ಟ್ರದ ನಾಸಿಕ್ನಲ್ಲಿ ಡಾ ಜಾಕೀರ್ ಹುಸೇನ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಟ್ಯಾಂಕರ್ ಸೋರಿಕೆಯಾದ ಘಟನೆ ಬುಧವಾರ ನಡೆದಿದ್ದು, ಘಟನೆಯಲ್ಲಿ 22 ಮಂದಿ ಮೃತಪಟ್ಟಿದ್ದಾರೆ.
ಸುಮಾರು 20 ಸಾವಿರ ಲೀಟರ್ ಆಕ್ಸಿಜನ್ ಸೋರಿಕೆಯಾಗಿದೆ ಎಂದು ತಿಳಿದು ಬಂದಿದ್ದು, ಆಸ್ಪತ್ರೆಯಲ್ಲಿ 171 ರೋಗಿಗಳು ಆಕ್ಸಿಜನ್ನಲ್ಲಿದ್ದು, 21 ರೋಗಿಗಳು ವೆಂಟಿಲೇಟರ್ನಲ್ಲಿದ್ದರು. ಆಮ್ಲಜನಕ ಸೋರಿಕೆಯಿಂದಾಗಿ 61 ರೋಗಿಗಳ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದು, ಬೇರೆ ಆಸ್ಪತ್ರೆಗಳಿಗೆ ರವಾನೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಘಟನೆ ಬಗ್ಗೆ ಮಾತನಾಡಿರುವ ಸಚಿವ ರಾಜೇಂದ್ರ ಶಿಂಗಾನೆ, ಇದೊಂದು ದುರದೃಷ್ಟಕರ ಘಟನೆ. ಪ್ರಾಥಮಿಕ ಮಾಹಿತಿ ಪ್ರಕಾರ 22 ಜನರು ಸಾವನ್ನಪ್ಪಿದ್ದಾರೆ. ಸಂಪೂರ್ಣ ವರದಿ ನೀಡುವಂತೆ ಈಗಾಗಲೇ ಸೂಚನೆ ನೀಡಿದ್ದು, ತನಿಖೆಗೆ ಆದೇಶ ನೀಡಲಾಗಿದೆ ಎಂದಿದ್ದಾರೆ. ಇದಕ್ಕೆ ಕಾರಣರಾದವರನ್ನ ಸುಮ್ಮನೆ ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಇಂದು 2,95,041 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ, ಇದು 24 ಗಂಟೆಗಳಲ್ಲಿ ದಾಖಲೆಯ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 2,023 ಸಾವನ್ನಪ್ಪಿದ್ದು, 1,67,457 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಗಳು ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.