ಮುಂಬೈ: ಇನ್ನೇನು ಐಪಿಎಲ್ ಕ್ರಿಕೆಟ್ ಪಂದ್ಯಗಳು ಆರಂಭವಾಗಲು ಕೆಲವೇ ದಿನಗಳು ಬಾಕಿಯಿವೆ. ಹೀಗಿರುವಾಗ ಮುಂಬೈನ ವಾಂಖೆಡೆ ಕ್ರೀಡಾಂಗಣದ ಸಿಬ್ಬಂದಿಗೆ ಕೋರೋನಾ ಸೋಂಕು ತಗುಲಿರುವುದು ದೃಢವಾಗಿದೆ.
ಏ.10ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಪಂದ್ಯ ನಡೆಯಲಿದೆ. ಹೀಗಿರುವಾಗ ಕ್ರೀಡಾಂಗಣದ ಸಿಬ್ಬಂದಿಗೆ ಕೊರೋನಾ ತಗುಲಿರುವುದು ಆತಂಕಕ್ಕೆ ಕಾರಣವಾಗಿದೆ.
ಕಳೆದ ಶುಕ್ರವಾರ ವಾಂಖೆಡೆಯ ಐವರು ಸಿಬ್ಬಂದಿಗೆ ಮತ್ತು ನಿನ್ನೆ ಓರ್ವ ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿರುವುದು ಖಚಿತವಾಗಿದೆ. ಈ ಆವೃತ್ತಿಯ ಐಪಿಎಲ್ನಲ್ಲಿ ವಾಂಖೆಡೆ ಕ್ರೀಡಾಂಗಣದಲ್ಲಿ ಒಟ್ಟು 10 ಪಂದ್ಯಗಳು ನಡೆಯಲಿವೆ.
ವಾಂಖೆಡೆ ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿರುವುದು ಕಳವಳಕಾರಿ. ಸೋಂಕಿತ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಿದೆ. ಬೇರೆ ಕ್ರೀಡಾಂಗಣದಿಂದ ಈಗಾಗಲೇ ಸಿಬ್ಬಂದಿಯನ್ನು ಕರೆತರಲಾಗಿದೆ. ಯಾವ ತಂಡದ ಆಟಗಾರರೂ ಕ್ರೀಡಾಂಗಣಕ್ಕೆ ಬಂದಿಲ್ಲ. ಹೀಗಾಗಿ ಆತಂಕಕ್ಕೊಳಗಾಗುವ ಅವಶ್ಯಕತೆಯಿಲ್ಲ ಎಂದು ವಾಂಖೆಡೆಯ ಹಿರಿಯ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದ್ದಾರೆ.