ಬೆಂಗಳೂರು: ಚಿಕನ್ ಬೆಲೆ ರಾಕೆಟ್ ವೇಗದಲ್ಲಿ ಏರುತ್ತಿದೆ. ಇದರಿಂದ ನಾನ್ ವೆಜ್ ಪ್ರಿಯರು ಕಂಗಾಲಾಗಿದ್ದಾರೆ. ಒಂದು ಕೆಜಿ ಚಿಕನ್ ಬೆಲೆ ಈಗ 360ರೂ.ಗಳಿಗೆ ಏರಿಕೆಯಾಗಿದೆ. ದೇಶದಲ್ಲಿಯೇ ಈ ಬೆಲೆ ಸಾರ್ವಕಾಲಿಕ ದಾಖಲೆಯಾಗಿದೆ.
ಕಳೆದ ವರ್ಷ ಹೇರಿದ್ದ ಲಾಕ್ಡೌನ್ ಸಮಯದಲ್ಲಿ ಕೊಳಿ ಉದ್ಯಮದ ಮೇಲೆ ತೀವ್ರ ಹೊಡೆತ ಬಿದ್ದಿತ್ತು. ಅಲ್ಲದೇ ಹಕ್ಕಿ ಜ್ವರ ಸಮಯದಲ್ಲಿಯೂ ಚಿಕನ್ನ್ನು ಕೊಳ್ಳುವವರೇ ಇಲ್ಲದಂತಾಗಿತ್ತು. ಹಕ್ಕಿಜ್ವರದ ಸಮಯದಲ್ಲಿ ಒಂದು ಕೆಜಿ ಚಿಕನ್ ಬೆಲೆ 150ರೂ.ಗೆ ಇಳಿಕೆಯಾಗಿತ್ತು.
ಕೋಳಿ ಪೂರೈಕೆ ಕೊರತೆಯೇ ಚಿಕನ್ ಬೆಲೆ ಏರಲು ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. ಬೇಸಿಗೆಯಾದ್ದರಿಂದ ಕೋಳಿಗಳು ಹೆಚ್ಚಿನ ತಾಪಮಾನ ತಡೆಯದೇ ಅಸು ನೀಗುತ್ತಿವೆ. ಹೀಗಾಗಿ ಚಿಕನ್ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ ಎಂದು ಮಾರುಕಟ್ಟೆಯಲ್ಲಿ ಹೇಳಲಾಗುತ್ತಿದೆ.
ಚಿಕನ್ ಬೆಲೆ ಹೆಚ್ಚಳವಾಗಿರುವುದರಿಂದ ನಾನ್ ವೆಜ್ ಹೊಟೇಲ್ಗಳು ಬೆಲೆ ಏರಿಕೆ ಮಾಡಲು ನಿರ್ಧರಿಸಿವೆ. ಇದರಿಂದ ಒಂದು ಪ್ಲೇಟ್ ಬಿರ್ಯಾನಿಗಿದ್ದ 125ರೂ.ಗಳನ್ನು 150ರೂ.ಗೆ ಹೆಚ್ಚಿಸಲಾಗಿದೆ. ಇದರಿಂದ ಗ್ರಾಹಕರು ಪರಿತಪಿಸುತ್ತಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ತರಹೇವಾರಿ ಮೆಮೆಗಳು ಬರುತ್ತಿವೆ.