ಆರ್ ಸಿಬಿ ತಂಡದ ಆಪದ್ಭಾಂದವ ಎಂದೇ ಹೆಸರಾದ ದಕ್ಷಿಣ ಆಫ್ರಿಕಾ ಮೂಲದ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ಐಪಿಎಲ್ ನಲ್ಲಿ 5000 ರನ್ ಪೂರೈಸಿದ ಸಾಧನೆ ಮಾಡಿದ್ದಾರೆ.
ಮಂಗಳವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸಂಕಷ್ಟದಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 42 ಎಸೆತಗಳಲ್ಲಿ 75 ರನ್ ಸಿಡಿಸುವ ಮೂಲಕ ಮತ್ತೊಮ್ಮೆ ತಂಡಕ್ಕೆ ನೆರವಾದರು.
ಡಿವಿಲಿಯರ್ಸ್ ಈ ಮೂಲಕ ಐಪಿಎಲ್ ನಲ್ಲಿ 5000 ರನ್ ಪೂರೈಸಿದ 2ನೇ ವಿದೇಶೀ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು. ಇದಕ್ಕೂ ಮುನ್ನ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಈ ಸಾಧನೆ ಮಾಡಿದ್ದಾರೆ. ಅಲ್ಲದೇ ಈ ಸಾಧನೆ ಮಾಡಿದ ಒಟ್ಟಾರೆ 6ನೇ ಆಟಗಾರ ಎನಿಸಿಕೊಂಡರು.
ಐಪಿಎಲ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ 6 ಆಟಗಾರರ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ನಾಯಕ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕೊಹ್ಲಿ 6041 ರನ್ ಗಳಿಸಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸುರೇಶ್ ರೈನಾ 5472 ಎರಡನೇ ಸ್ಥಾನದಲ್ಲಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಶಿಖರ್ ಧವನ್ (5,456), ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮ (5,431), ಸನ್ ರೈಸರ್ಸ್ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ (5390), ಪಂಜಾಬ್ ತಂಡದ ಕ್ರಿಸ್ ಗೇಲ್ ಇದ್ದಾರೆ.
ಎಬಿಡಿ 5000 ರನ್ ಪೂರೈಸಲು 161 ಇನಿಂಗ್ಸ್ ತೆಗೆದುಕೊಂಡಿದ್ದರೆ, ಡೇವಿಡ್ ವಾರ್ನರ್ 135 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ವಿರಾಟ್ ಕೊಹ್ಲಿ 157 ಪಂದ್ಯಗಳಲ್ಲಿ 5000 ರನ್ ಪೂರೈಸಿದ್ದಾರೆ.