ಆರಂಭಿಕ ದೇವದತ್ ಪಡಿಕಲ್ ಸಿಡಿಸಿದ ಚೊಚ್ಚಲ ಶತಕ ಹಾಗೂ ನಾಯಕ ವಿರಾಟ್ ಕೊಹ್ಲಿ ಅರ್ಧಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 10 ವಿಕೆಟ್ ಗಳಿಂದ ರಾಜಸ್ಥಾನ್ ರಾಯಲ್ಸ್ ವಿರುದ್ಧ ಜಯಭೇರಿ ಬಾರಿಸಿದೆ.
ಮುಂಬೈನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ರನ್ ಚೇಸ್ ಮಾಡುವ ನಿರ್ಧಾರ ಕೈಗೊಂಡ ಆರ್ ಸಿಬಿ, ರಾಜಸ್ಥಾನ್ ರಾಯಲ್ಸ್ ತಂಡವನ್ನು 20 ಓವರ್ ಗಳಲ್ಲಿ 9 ವಿಕೆಟ್ ಗೆ 177 ರನ್ ಗಳಿಗೆ ನಿಯಂತ್ರಿಸಿತು. ಸ್ಪರ್ಧಾತ್ಮಕ ಮೊತ್ತ ಗುರಿ ಬೆಂಬತ್ತಿದ ಆರ್ ಸಿಬಿ 16.5 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ ಜಯಭೇರಿ ಬಾರಿಸಿತು.
ಈ ಗೆಲುವಿನೊಂದಿಗೆ ಆರ್ ಸಿಬಿ ಆಡಿದ 4 ಪಂದ್ಯಗಳಲ್ಲಿ ನಾಲ್ಕರಲ್ಲೂ ಜಯ ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಹಿಂದಿಕ್ಕಿ ಮರಳಿ ಅಗ್ರಸ್ಥಾನಕ್ಕೇರಿತು.
ಆರ್ ಸಿಬಿ ತಂಡಕ್ಕೆ ದೇವದತ್ ಪಡಿಕಲ್ ಮತ್ತು ವಿರಾಟ್ ಕೊಹ್ಲಿ ಕನಸಿನ ಆರಂಭ ನೀಡಿದ್ದೂ ಅಲ್ಲದೇ ಗೆಲುವು ಕೂಡ ಖಚಿತಪಡಿಸಿದರು. ದೇವದತ್ ಪಡಿಕಲ್ 50 ಎಸೆತಗಳಲ್ಲಿ 11 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ ಶತಕ ಪೂರೈಸಿದರು. ಇದು ಪ್ರಸಕ್ತ ಸಾಲಿನ ಅತ್ಯಂತ ವೇಗದ ಐಪಿಎಲ್ ಶತಕವಾಗಿದೆ.
ವಿರಾಟ್ ಕೊಹ್ಲಿ 47 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ಸೇರಿದ 72 ರನ್ ಬಾರಿಸಿ ಅಜೇಯರಾಗಿ ಉಳಿದರು. ಇದು ಕೊಹ್ಲಿ ಪ್ರಸಕ್ತ ಸಾಲಿನಲ್ಲಿ ದಾಖಲಿಸಿದ ಚೊಚ್ಚಲ ಅರ್ಧಶತಕವಾಗಿದೆ. ಅಲ್ಲದೇ ಇದು ಕೊಹ್ಲಿಗೆ ನಾಯಕನಾಗಿ 50ನೇ ಅರ್ಧಶತಕ ಹಾಗೂ 6000 ರನ್ ಪೂರೈಸಿದ ಮೊದಲಿಗ ಎಂಬ ಗೌರವಕ್ಕೆ ಪಾತ್ರರಾದರು.