ಬೆಂಗಳೂರು: ಕೊರೊನಾ ಸೋಂಕಿತರಿಗೆ ನೀಡಲಾಗುವ ರೆಮ್ಡಿಸಿವರ್ ಇಂಜೆಕ್ಷನ್ ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಪ್ರತ್ಯೇಕ ಮೂರು ಸ್ಥಳಗಳಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರ್ಯುವೈದ್ಯ, ನರ್ಸ್ ಒಳಗೊಂಡಂತೆ ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ವೈದ್ಯ ಅಭಿಷೇಕ್ ಚೌಧರಿ, ವಿನೋದ್, ಕುಮಾರಸ್ವಾಮಿ ಲಿಂಗರಾಜ್, ಬಸವರಾಜ್ ಸೇರಿದಂತೆ ಎಂಟು ಮಂದಿ ಆರೋಪಿಗಳನ್ನು ಬಂಧಿಸಿ 14 ರೆಮ್ ಡೆಸಿವರ್ ಇಂಜೆಕ್ಷನ್ ಗಳನ್ನು ಸಿಸಿಬಿ ವಶಕ್ಕೆ ಪಡೆದುಕೊಂಡು ಪ್ರತ್ಯೇಕ ಮೂರು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದೆ.
ಅಂದಹಾಗೆ ಕೊರೊನಾ ಸೋಂಕಿಗೆ ರಾಮಬಾಣವಾಗಿರುವ ರೆಮ್ಡಿಸಿವರ್ ಇಂಜೆಕ್ಷನ್ ಗಳನ್ನು ರೋಗಿಗಳಿಗೆ ನೀಡಲಾಗುತ್ತಿದ್ದು ಇದರಿಂದ ಬಹುತೇಕರಿಗೆ ರೋಗ ಗುಣವಾಗುತ್ತಿದೆ. ಕೊರೊನಾ ಎರಡನೇ ಅಲೆ ತೀವ್ರಗೊಂಡ ಹಿನ್ನೆಲೆಯಲ್ಲಿ ಪರಿಸ್ಥಿತಿ ಲಾಭ ಪಡೆಯಲು ಪ್ರತಿಷ್ಠಿತ ಆಸ್ಪತ್ರೆಯ ಮೆಡಿಕಲ್ ಗೆ ಬರುತ್ತಿದ್ದ ಇಂಜೆಕ್ಷನ್ ನರ್ಸ್ ಗಳು ಅಕ್ರಮವಾಗಿ ತೆಗೆದಿರಿಸಿಕೊಂಡು ಕೊರೊನಾ ರೋಗಿಗಳನ್ನು ಗುರಿಯಾಗಿಸಿ ಸುಮಾರು 15 ರಿಂದ 20 ಸಾವಿರ ರೂಪಾಯಿ ವರೆಗೂ ಮಾರಾಟ ಮಾಡುತ್ತಿದ್ದರು.
ಬಂಧಿತ ಆರೋಪಿಗಳ ಪೈಕಿ ಕೋಣನುಕುಂಟೆಯಲ್ಲಿ ಹಲವು ಪಾರ್ವತಿ ಕ್ಲಿನಿಕ್ ಇಟ್ಟುಕೊಂಡಿದ್ದ. ಈತನ ಜೊತೆ ವಿನೋದ್ ಎಂಬಾತ ಕೆಲಸ ಮಾಡುತ್ತಿದ್ದ. ಇಬ್ಬರು ಸೇರಿ ರೆಮ್ಡಿಸಿವರ್ ಇಂಜೆಕ್ಷನ್ ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದರು. ಈ ಸಂಬಂಧ ಇಬ್ಬರನ್ನು ಕೋಣನಕೊಂಟೆ ಪೊಲೀಸರಿಗೆ ಸಿಸಿಬಿ ಒಪ್ಪಿಸಲಾಗಿತ್ತು. ಆರೋಪಿಗಳು ಆಸ್ಪತ್ರೆಗಳಿಗೆ ಬರುವ ಇಂಜೆಕ್ಷನ್ ಗಳನ್ನು ಅಕ್ರಮವಾಗಿ ತೆಗೆದಿರಿಸಿಕೊಂಡು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದರು.
ಕಳೆದೊಂದು ತಿಂಗಳಿಂದ ಆರೋಪಿಗಳು ಇಂಜೆಕ್ಷನ್ ಗಳನ್ನು ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದರು. ಈ. ದಂಧೆಯಲ್ಲಿ ಯಾವ ಯಾವ ಆಸ್ಪತ್ರೆಯ ವೈದ್ಯರು ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ಸಿಸಿಬಿ ತನಿಖೆ ನಡೆಸುತ್ತಿದೆ.