ಪಾಟ್ನಾ : ಮೇವು ಹಗರಣದಲ್ಲಿ ಕಂಬಿ ಎಣಿಸುತ್ತಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಕಳೆದ ಎರಡೂವರೆ ವರ್ಷಗಳಿಂದ ಜೈಲಿನಲ್ಲಿರುವ ಲಾಲು ಪ್ರಸಾದ್ ಯಾದವ್ ಜೈಲಿನಿಂದ ಹೊರಗೆ ಬರಲಿದ್ದಾರೆ.
ಅನಾರೋಗ್ಯಪೀಡಿತರಾಗಿರುವ ಲಾಲು ಪ್ರಸಾದ್ ಯಾದವ್ ಅವರು ಪ್ರಸ್ತುತ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದುಮ್ಕಾ ಖಜಾನೆ ಪ್ರಕರಣ ಸಂಬಂಧ ಲಾಲು ಯಾದವ್ ಶಿಕ್ಷೆಗೊಳಗಾಗಿದ್ದರು. ಇದೀಗ ಆ ಪ್ರಕರಣದಲ್ಲಿ ಅವರಿಗೆ ಜಾಮೀನು ಸಿಕ್ಕಿದೆ. ಅವರ ಜಾಮೀನು ಪ್ರಕ್ರಿಯೆ ಬಾಕಿ ಉಳಿದಿದೆ.
ಆರ್‌ಜೆಡಿ ನಾಯಕ ಮತ್ತು ಲಾಲು ಅವರ ಪುತ್ರ ತೇಜಶ್ವಿ ಯಾದವ್ ಅವರು ತಮ್ಮ ತಂದೆಗೆ ಜಾಮೀನು ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿ, ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ ಮತ್ತು ತಮಗೆ ನ್ಯಾಯ ಸಿಗಲಿದೆ ಎಂಬ ವಿಶ್ವಾಸವಿತ್ತು ಎಂದು ಹೇಳಿದರು.
ಜಾಮೀನು ಅವಧಿಯಲ್ಲಿ ಅನುಮತಿಯಿಲ್ಲದೆ ದೇಶ ಬಿಟ್ಟು ಹೋಗುವಂತಿಲ್ಲ. ವಿಳಾಸ ಅಥವಾ ಮೊಬೈಲ್ ಸಂಖ್ಯೆ ಬದಲಿಸಬಾರದು ಎಂದು ಕೋರ್ಟ್ ತಿಳಿಸಿದೆ. ಇದೇ ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಇತರೆ ಮೂರು ಪ್ರಕರಣಗಳಲ್ಲಿ ಅವರು ಈಗಾಗಲೇ ಜಾಮೀನು ಪಡೆದುಕೊಂಡಿದ್ದಾರೆ. ದುಮ್ಕಾ ಖಜಾನೆಯಿಂದ 90ರ ದಶಕದಲ್ಲಿ ಕಾನೂನುಬಾಹಿರವಾಗಿ 3.13 ಕೋಟಿ ರೂ ಹಣ ಪಡೆದಿದ್ದ ಸಂಬಂಧ ಪ್ರಕರಣ ನ್ಯಾಯಾಲಯದಲ್ಲಿದೆ.