ರಾಜ್ಯದಲ್ಲಿ ಮೂರನೇ ಅಲೆ ನಿಯಂತ್ರಣ ತಡೆಯಲು ಅಗತ್ಯವಾದ ಮೂಲಭೂತ ಸೌಕರ್ಯಕ್ಕಾಗಿ 1500 ಕೋಟಿ ರೂ.ಗೆ ಅನುಮೋದನೆ ನೀಡಲಾಗಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ ತಿಳಿಸಿದ್ದಾರೆ.
ಕೋವಿಡ್ ಕಾರ್ಯಪಡೆ ಸಭೆಯ ಬಳಿಕ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ 19 ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ಆಗಿದ್ದು, ಮೂಲಭೂತ ಸೌಕರ್ಯ ಹೆಚ್ಚಳ ಮಾಡಲು ನಿರ್ಣಯಿಸಲಾಗಿದೆ ಎಂದರು.
ಪ್ರತಿ ತಾಲೂಕಿನಲ್ಲಿ 25 ಐಸಿಯು ಬೆಡ್ ಹೊಂದಿರುವ ನೂರು ಬೆಡ್ ಗಳನ್ನು ಮಾಡಬೇಕು. ಆಕ್ಸಿಜನ್ ಪೂರೈಕೆಗೆ ವ್ಯವಸ್ಥೆ ಮಾಡಲು ತೀರ್ಮಾನಿಸಲಾಯಿತು. ಇದಕ್ಕಾಗಿ ಹೆಚ್ಚುವರಿ 4 ಸಾವಿರ ವೈದ್ಯರು ಹಾಗೂ ನರ್ಸ್ ಗಳು ಬೇಕಾಗಿದೆ ಎಂದು ಅವರು ವಿವರಿಸಿದರು.
ಹೆಚ್ಚುವರಿ ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ಒಂದೂವರೆ ಸಾವಿರ ಕೋಟಿ ಖರ್ಚು ಆಗುತ್ತದೆ. ಸಂಬಳ ಹೊರತುಪಡಿಸಿ 800 ಕೋಟಿ ರೂ. ಬೇಕು. ಒಟ್ಟಾರೆ ಒಂದೂವರೆ ಸಾವಿರ ಕೋಟಿಗೆ ಅನುಮೋದನೆ ನೀಡಲಾಗಿದೆ. 19 ಜಿಲ್ಲಾ ಆಸ್ಪತ್ರೆ ಗಳು,146 ತಾಲೂಕುಗಳಲ್ಲಿ ಬೆಡ್ ನಿರ್ಮಾಣ ಮಾಡಲಾಗುವುದು. ಬೆಂಗಳೂರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ನಿರ್ಮಾಣ ಮಾಡಲು ಜಾಗ ಹುಡುಕುತ್ತಿದ್ದೇವೆ ಎಂದು ಅಶ್ವಥ್ ನಾರಾಯಣ ಹೇಳಿದರು.